ಮೈಸೂರು : ಸಾರ್ವಜನಿಕ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಐವರು ಯುವಕರನ್ನು ಕರೆತಂದ ಕೆ.ಆರ್. ಠಾಣಾ ಪೊಲೀಸರು ಅವರಿಗೆ ನೀತಿಪಾಠ ಹೇಳಿ ಕಳುಹಿಸಿದ್ದಾರೆ.
ಬುಧವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಕೃಷ್ಣರಾಜ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಾನುಜ ರಸ್ತೆಯ ನಿವಾಸಿ ಹಾಗೂ ವಿದ್ಯಾರ್ಥಿಯೊಬ್ಬನ ಹುಟ್ಟುಹಬ್ಬ ಆಚರಣೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಯುವಕರ ಗುಂಪು ಕಟ್ಟಿಕೊಂಡು ಜೋರು ಶಬ್ಧದೊಂದಿಗೆ ಕೇಕ್ ಕತ್ತರಿಸಿ ಆಚರಣೆ ಮಾಡಲಾಗಿದೆ.
ಠಾಣೆಯ ಇನ್‌ಸ್ಪೆಕ್ಟರ್ ಡಿ.ಪಿ.ಧನರಾಜ್ ಅವರಿಗೆ ವಿಚಾರ ಗೊತ್ತಾಗಿದೆ. ತಕ್ಷಣವೇ ಅವರು ತಮ್ಮ ಸಿಬ್ಬಂದಿಯೊಡನೆ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರು ಬರುವುದನ್ನು ಅರಿತ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ಇನ್‌ಸ್ಪೆಕ್ಟರ್ ಧನರಾಜ್, ಗುರುವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಸ್ಥಳೀಯರಿಂದ ಮಾಹಿತಿ ಪಡೆಯುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡವರ ವಿವರ ಪಡೆದಿದ್ದಾರೆ. ನಂತರ ಬೀಟ್ ಪೊಲೀಸರ ಮೂಲಕ ಅವರುಗಳನ್ನು ಠಾಣೆಗೆ ಕರೆಸಿದ್ದಾರೆ.
ನಂತರ ಅವರುಗಳು ವಿದ್ಯಾರ್ಥಿಗಳು ಎಂಬ ಅಂಶ ಪೊಲೀಸರಿಗೆ ಗೊತ್ತಾಗಿದೆ. ಅವರುಗಳಿಗೆ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಕೆಲಹೊತ್ತು ಪಾಠ ಮಾಡಿದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು, ಮುಂದೆ ಈ ರೀತಿ ವರ್ತಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.





