ಮೈಸೂರು: ವಿಷ್ಣು ವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅಭಿಮಾನಿಗಳು ರಕ್ತದಾನ ಮತ್ತು ಕೋಟಿಗೊಬ್ಬ ಕ್ಯಾಲೆಂಡರ್‌ಅನ್ನು ಅನಾವರಣ ಮಾಡಿದ್ದಾರೆ.
ಇಂದು (ಡಿಸೆಂಬರ್.30) ನಟ ವಿಷ್ಣುವರ್ಧನ್ ಅವರ 15ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದ ಎಚ್.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್ ಸಮೀಪದಲ್ಲಿರುವ ವಿಷ್ಣುವರ್ಧನ್ ಸ್ಮಾರಕಕ್ಕೆ ನೂರಾರು ಜನ ಭೇಟಿ ನೀಡಿದ್ದಾರೆ. ಈ ವೇಳೆ ಅವರ ಕುಟುಂಬಸ್ಥರಾದ ಅವರ ಪತ್ನಿ ಭಾರತಿ ವಿಷ್ಣು ವರ್ಧನ್ ಹಾಗೂ ಅಳಿಯ ಅನಿರುದ್ಧ್ ಅವರು ಕೂಡ ಸ್ಮಾರಕಕ್ಕೆ ಭೇಟಿ ನೀಡಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ವಿಷ್ಣು ವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆಯನ್ನು ಸಾರ್ವಜನಿಕರಿಗೆ ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 60ಕ್ಕೂ ಅಧಿಕ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದ್ದಾರೆ. ಬಳಿಕ ವಿಷ್ಣು ವರ್ಧನ್ ಅಭಿಮಾನಿ ಬಳಗವೂ ಭಾರತಿ ವಿಷ್ಣು ವರ್ಧನ್ ಹಾಗೂ ಅನಿರುದ್ಧ ಅವರಿಂದ ವಿಷ್ಣು ವರ್ಧನ್ ಅವರ 2025ರ ಕೋಟಿಗೊಬ್ಬ ಕ್ಯಾಲೆಂಡರ್ ಅನ್ನು ಅನಾವರಣಗೊಳಿಸಿದ್ದಾರೆ.





