Mysore
30
scattered clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಜ್ಞಾನದ ಜೊತೆ ಕೌಶಲವೂ ಮುಖ್ಯ : ಪರೀಕ್ಷಾಂಗ ಕುಲಸಚಿವ ನಾಗರಾಜು ಅಭಿಮತ

ಮೈಸೂರು : ಇಂದಿನ ಕಾಲದಲ್ಲಿ ಜ್ಞಾನದ ಜೊತೆಗೆ ಕೌಶಲ ತುಂಬಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ.ಎನ್.ನಾಗರಾಜು ಹೇಳಿದರು.

ನಗರದ ಮೈಸೂರು ವಿಶ್ವವಿದ್ಯಾನಿಲಯದ ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ವಿಶ್ವ ವಿದ್ಯಾನಿಲಯ ವೃತ್ತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಾನಸ ಗಂಗೋತ್ರಿಯ ಕೃಷಿ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ‘ಉದ್ಯೋಗಾರ್ಹತೆ ಸಂವಹನ ಮತ್ತು ಮೃದು ಕೌಶಲ’ ಕುರಿತು ರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಯುವಕರಲ್ಲಿ ಸಂವಹನ ಕೌಶಲಗಳ ಕೊರತೆಯಿಂದಾಗಿ, ಪದವಿಗೆ ತಕ್ಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಶೇ.65ರಷ್ಟು ಯುವಶಕ್ತಿ ಇದೆ. ಈ ಯುವಶಕ್ತಿಗೆ ಸೂಕ್ತ ಮಾರ್ಗದರ್ಶನ ನೀಡಿದಾಗ ಭವಿಷ್ಯದಲ್ಲಿ ಉದ್ಯೋಗಾವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಅವಕಾಶವಾಗುತ್ತದೆ ಎಂದರು.

ಉದ್ಯೋಗ ಕ್ಷೇತ್ರದಲ್ಲಿ ನಮ್ಮ ಸಂಪರ್ಕ, ಸಂವಹನವನ್ನು ಹೇಗೆ ಸಮರ್ಥವಾಗಿ ಅಳವಡಿಸಿಕೊಳ್ಳುತ್ತೇವೆ? ಹೇಗೆ ಕಾಣಿಸಿಕೊಳ್ಳುತ್ತೇವೆ? ಏನು ಮಾತನಾಡುತ್ತೇವೆ ಮತ್ತು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬ ನಾಲ್ಕು ಅಂಶಗಳು ಪ್ರಮುಖವಾಗುತ್ತವೆ. ಇದರ ಬಗ್ಗೆ ಗಮನವಿರಲಿ ಎಂದು ಅವರು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ವೃತ್ತಿ ಕೇಂದ್ರದ ಸಂಯೋಜಕ ಪ್ರೊ.ಆರ್.ಮಹೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ನಾಮುಂದು, ತಾಮುಂದು ಎನ್ನುವ ಅನಾರೋಗ್ಯಕರ ಪೈಪೋಟಿಯಿದೆ. ಉನ್ನತ ಶಿಕ್ಷಣ ಪಡೆದ ಮಾತ್ರಕ್ಕೆ ಉದ್ಯೋಗ ಸಿಗುತ್ತದೆ ಎಂಬ ಭಾವನೆ ಸರಿಯಲ್ಲ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗಾಧಾರಿತ ಕೌಶಲವನ್ನು ಪಡೆಯುವುದು ಅನಿವಾರ್ಯ. ಕೌಶಲಾಧಾರಿತ ತರಬೇತಿ ಪಡೆಯುವುದು ಕೇವಲ ಉದ್ಯೋಗಕ್ಕೆ ಸೀಮಿತ ಅಲ್ಲ, ಅದು ನಿಮ್ಮ ವ್ಯಕ್ತಿತ್ವವನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.

ರೇಷ್ಮೆ ಕೃಷಿ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಬಿ.ಸಣ್ಣಪ್ಪ, ಪ್ರೊ.ಟಿ.ಎಸ್.ಜಗದೀಶ್ ಕುಮಾರ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

 

Tags:
error: Content is protected !!