ಮೈಸೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಮತಗಳ ಕಳ್ಳತನ ಮಾಡಲಾಗಿದೆ ಎಂಬ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಕ್ಕೆ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಆಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಹಾಗಾದರೆ ಎನ್.ಆರ್.ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ 70 ಸಾವಿರ ಲೀಡ್ ಸಿಕ್ಕಿದೆ. ಅಲ್ಲಿ ನೀವು ಮತಗಳ ಕಳ್ಳತನ ಮಾಡಿದ್ದೀರಾ? ನೀವು ಮತದಾರರಿಗೆ ತಲಾ 500 ರೂಪಾಯಿ ಹಂಚಿಕೆ ಮಾಡಿಲ್ವಾ ಎಂದು ಪ್ರಶ್ನೆ ಮಾಡಿದ ಅವರು, ಈ ಬಗ್ಗೆ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಿ. ಲೋಕಸಭಾ ಚುನಾವಣೆಯನ್ನು ಬಿಜೆಪಿ ಪ್ರಾಮಾಣಿಕವಾಗಿ ಎದುರಿಸಿದೆ.
ಯದುವೀರ್ ಅವರನ್ನು ಜನರು ಗೌರವ ಭಾವನೆಯಿಂದ ಕಂಡು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ನಾಯಕರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಿಗೆ ನಾಚಿಕೆ ಆಗಬೇಕು. ಸೋಲು ಸೋಲೇ, ನೀವು ಈಗ ಎಷ್ಟೇ ಬೊಂಬಡಾ ಬಜಾಯಿಸಿದರೂ ನಿಮ್ಮನ್ನು ಲೋಕಸಭೆಗೆ ಕಳುಹಿಸೋದಿಲ್ಲ. ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಹಾಗೂ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.





