ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಪಕ್ಷದ ತತ್ವ ಸಿದ್ಧಾಂತದ ಪ್ರಕಾರ ನಡೆದುಕೊಳ್ಳಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಬಿಜೆಪಿ ಕಾರ್ಯಕರ್ತರು ಬಿ.ವೈ.ವಿಜಯೇಂದ್ರ ಅವರಿಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಪ್ರತಿಕ್ರಿಯೆ ನೀಡಿರುವ ಸಂಸದ ಯದುವೀರ್ ಒಡೆಯರ್ ಅವರು, ಪ್ರತಾಪ್ ಸಿಂಹ ಅವರ ಇತ್ತೀಚಿನ ನಡೆಗೆ ಬೇಸರ ವ್ಯಕ್ತವಾಗಿದೆ. ಕಳೆದ ಮೂರು ನಾಲ್ಕು ತಿಂಗಳಿನಿಂದ ಅವರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸಹಜವಾಗಿಯೇ ಕಾರ್ಯಕರ್ತರಿಗೆ ಅದು ಬೇಸರ ತರಿಸಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ವರಿಷ್ಠರಿಗೆ ದೂರು ನೀಡಿದ್ದಾರೆ. ಈ ಕುರಿತು ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಕ್ರಮ ಕೈಗೊಳ್ಳುತ್ತಾರೆ. ಪ್ರತಾಪ್ ಸಿಂಹ ಅವರು ಭಿನ್ನಾಭಿಪ್ರಾಯಗಳನ್ನು ದೂರ ಇರಿಸಲಿ. ಪಕ್ಷಕ್ಕೆ ಧಕ್ಕೆ ಬರದ ರೀತಿ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಸಣ್ಣ ಪುಟ್ಟ ಸಮಸ್ಯೆ ಇದ್ದರೆ ಅದನ್ನು ಎಲ್ಲಾ ಕೂತು ಮಾತನಾಡಿ ಬಗೆಹರಿಸುತ್ತಾರೆ ಎಂದು ತಿಳಿಸಿದರು.