ಮೈಸೂರು : ಗಂಜಾ ವ್ಯಸನಿಗಳನ್ನು ಮಟ್ಟ ಹಾಕಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರಿಗೆ, ಕೆಟ್ಟುನಿಂತಿರುವ ಬೀದಿದೀಪಗಳೇ ಅಡ್ಡಿಯಾಗಿವೆ. ಪರಿಣಾಮ ಕಾರ್ಯಾಚರಣೆಯೂ ಸಾಧ್ಯವಾಗುತ್ತಿಲ್ಲ.
ನಗರದ ಮೇಟಗಳ್ಳಿಯ ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾಟ ಅತಿಯಾಗಿದ್ದು, ಸಾರ್ವಜನಿಕರ ದೂರಿನ ಹಿನ್ನೆಲೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ, ಕಾರ್ಯಾಚರಣೆಗೆ ಹೋದ ಪೊಲೀಸರಿಗೆ ಕತ್ತಲೆಯೆ ಅಡ್ಡಿಯಾಗಿದ್ದು, ಬೀದಿದೀಪಗಳನ್ನು ಸರಿಪಡಿಸಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸ್ಮಶಾನದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಮೇಟಗಳ್ಳಿ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಸ್ಮಶಾನದತ್ತ ಎಂಟ್ರಿ ಕೊಟ್ಟಿದ್ದಾರೆ. ಆದರೆ, ದಾಳಿ ಸಮಯದಲ್ಲಿ ಬೀದಿ ದೀಪ ಇಲ್ಲದ ಸಮಯ ಗಾಂಜಾ ವ್ಯಸನಿಗಳು ಕತ್ತಲೆಯಲ್ಲೇ ಪರಾರಿಯಾಗಿದ್ದಾರೆ.
ಈ ಹಿಂದೆ ಪೊಲೀಸರೇ ಬೀದಿ ದೀಪಗಳನ್ನು ಸರಿಪಡಿಸುವಂತೆ ವಲಯ ಕಚೇರಿ ಐದಕ್ಕೆ ಪತ್ರ ಬರೆದಿದ್ದು, ಪೊಲೀಸರ ಮನವಿ ಪತ್ರಕ್ಕೂ ಪಾಲಿಕೆ ಅಧಿಕಾರಿಗಳು ಕ್ಯಾರೆ ಎಂದಿಲ್ಲ. ಪಾಲಿಕೆ ಅಧಿಕಾರಿಗಳು ಪೊಲೀಸರ ಮನವಿಗೆ ಸ್ಪಂದಿಸದಿದ್ದಲ್ಲಿ ಗಾಂಜಾ ವ್ಯಸನಿಗಳ ಕಾಟ ತಪ್ಪಿಸುವುದಾದರೂ ಹೇಗೆ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.





