Mysore
23
overcast clouds

Social Media

ಗುರುವಾರ, 17 ಜುಲೈ 2025
Light
Dark

ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ: ಮೃತಪಟ್ಟವರ ಸಂಖ್ಯೆ 2000ಕ್ಕೆ ಏರಿಕೆ

ಕಾಬೂಲ್ : ಪಶ್ಚಿಮ ಅಫ್ಘಾನಿಸ್ತಾನ ಭೂಕಂಪದಲ್ಲಿ ಮೃತಪಟ್ಟಿರುವವರ ಸಂಖ್ಯೆ ಭಾನುವಾರ ತೀಕ್ಷ್ಣ ಏರಿಕೆ ಕಂಡಿದ್ದು, 2,000ಕ್ಕೂ ಹೆಚ್ಚು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭೂಕಂಪದ ತೀವ್ರತೆಗೆ ಹಲವಾರು ಗ್ರಾಮಗಳು ನೆಲಸಮಗೊಂಡಿವೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶನಿವಾರ 6.3 ತೀವ್ರತೆಯಲ್ಲಿ ಭೂಕಂಪ ಅಪ್ಪಳಿಸಿದ್ದು, ಇದಾದ ನಂತರ ಎಂಟು ಬಾರಿ ಲಘು ಭೂಕಂಪ ಸಂಭವಿಸಿದ್ದರಿಂದ ಹೆರಾತ್ ನ ಪ್ರಾಂತೀಯ ರಾಜಧಾನಿಯ ನೈರುತ್ಯ ಭಾಗದಿಂದ 30 ಕಿಮೀ (19 ಮೈಲುಗಳು) ದೂರವಿರುವ ಗ್ರಾಮಗಳಿಗೆ ತಲುಪಲು ರಕ್ಷಣಾ ಪಡೆಗಳು ಹರಸಾಹಸ ಪಡಬೇಕಾಯಿತು.

ಭೂಕಂಪದಲ್ಲಿ ಸಂಭವಿಸಿರುವ ಹಾನಿಯು ಇದೀಗ ಸ್ಪಷ್ಟವಾಗುತ್ತಿದ್ದು, “ದುರದೃಷ್ಟವಶಾತ್, ಗಾಯಾಳುಗಳ ಸಂಖ್ಯೆ ತೀರಾ ಹೆಚ್ಚಿದೆ” ಎಂದು ಉಪ ಸರ್ಕಾರಿ ವಕ್ತಾರ ಬಿಲಾಲ್ ಕರಿಮಿ ತಿಳಿಸಿದ್ದಾರೆ.

ಶನಿವಾರ ಸರಿರಾತ್ರಿಯಲ್ಲಿ ಝಿಂದಾ ಜನ್ ಜಿಲ್ಲೆಯ ಸರ್ಬೊಲ್ಯಾಂಡ್ ಗ್ರಾಮದಲ್ಲಿ ಭೂಕಂಪದ ಕೇಂದ್ರಬಿಂದುವಿನ ಬಳಿ ಭೂಮಿಯು ಐದು ಗಂಟೆಗಿಂತ ಹೆಚ್ಚು ಕಾಲ ಕಂಪಿಸಿದ್ದರಿಂದ ಹತ್ತಾರು ಮನೆಗಳು ನಾಶವಾಗಿರುವುದನ್ನು ಎಎಫ್‌ಪಿ ಸುದ್ದಿ ಸಂಸ್ಥೆಯ ವರದಿಗಾರರು ಗಮನಿಸಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವರ್ಷ ಜೂನ್ ತಿಂಗಳಲ್ಲಿ 5.9 ತೀವ್ರತೆಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 1,000ಕ್ಕಿಂತ ಹೆಚ್ಚು ಮಂದಿ ಮೃತಪಟ್ಟು, ಸಹಸ್ರಾರು ಮಂದಿ ತಮ್ಮ ನಿವಾಸಗಳನ್ನು ಕಳೆದುಕೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!