ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭಾನುವಾರ ಸಂಜೆ ಹೃದಯಾಘಾತವಾಗಿದೆ ಎಂದು ಟೆಲಿಗ್ರಾಮ್ ಚಾನಲ್ ಜನರಲ್ ಎಸ್‌ವಿಆರ್ ಸುಳ್ಳು ಸುದ್ದಿ ಹರಡಿರುವುದು ಬಯಲಾಗಿದೆ. ಈ ಟೆಲಿಗ್ರಾಮ್ ಚಾನಲ್‌ನ ಸುದ್ದಿಯನ್ನು ಉಲ್ಲೇಖಿಸಿ ಹಲವು ಮಾಧ್ಯಮಗಳು ಪುಟಿನ್‌ಗೆ ಹೃದಯಾಘಾತ ಎಂದು ವರದಿ ಮಾಡಿದ್ದವು. ಈ ಚಾನಲ್ ಅನ್ನು ಮಾಜಿ ಕ್ರೆಮ್ಲಿನ್ ಉದ್ಯೋಗಿಯೊಬ್ಬರು ನಡೆಸುತ್ತಿದ್ದಾರೆ.
ಈ ವದಂತಿ ಕುರಿತು ಸತ್ಯಶೋಧನಾ ಸಂಸ್ಥೆ ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೇರ್ ಟ್ವೀಟ್ ಮಾಡಿ, ಪುಟಿನ್ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡುವುದಕ್ಕೆ ಕುಖ್ಯಾತಿ ಪಡೆದ ಚಾನಲ್ ವರದಿಯನ್ನಾಧರಿಸಿ ಅದರ ಹೇಳಿಕೆಯನ್ನು ಪರಾಮರ್ಶಿಸದೆ ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ಕೂಡ ಪುಟಿನ್‌ಗೆ ಹೃದಯಾಘಾತ ಎಂಬ ಸುಳ್ಳು ಸುದ್ದಿಯನ್ನೇ ವರದಿ ಮಾಡಿವೆ ಎಂದು ಬರೆದಿದ್ದಾರೆ.
ಈ ಚಾನಲ್ ಪ್ರಕಾರ ಭಾನುವಾರ ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಪುಟಿನ್ ಅವರ ಭದ್ರತಾ ಅಧಿಕಾರಿಗಳು ಅವರು ತಮ್ಮ ಬೆಡ್‌ರೂಂ ನೆಲದಲ್ಲಿ ಬಿದ್ದಿರುವುದನ್ನು ಗಮನಿಸಿದ್ದರು. ಪುಟಿನ್ ಪಕ್ಕದಲ್ಲೇ ಇದ್ದ ಆಹಾರ ಮತ್ತು ಪಾನೀಯಗಳಿದ್ದ ಮೇಜು ಕೂಡ ನೆಲಕ್ಕುರುಳಿತ್ತು ಎಂದು ಚಾನಲ್ ಹೇಳಿಕೊಂಡಿತ್ತು.
“ವೈದ್ಯರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ ನಂತರ ಪುಟಿನ್ ಅಧಿಕೃತ ನಿವಾಸದಲ್ಲಿರುವ ವಿಶೇಷ ಐಸಿಯುಗೆ ಅವರನ್ನು ವರ್ಗಾಯಿಸಿದ್ದರಿಂದ ಪುಟಿನ್ ಹೃದಯ ಬಡಿತ ಮತ್ತೆ ಆರಂಭವಾಗಿ ಅವರಿಗೆ ಪ್ರಜ್ಞೆ ಮರುಕಳಿಸಿತು,” ಎಂದು ಚಾನಲ್ ವರದಿ ಮಾಡಿತ್ತು.
https://x.com/zoo_bear/status/1716726915388858373?s=20
https://x.com/zoo_bear/status/1716727445716713533?s=20





