ಟೆಲ್ ಅವೀವ್ : “ಯುದ್ಧ ಮುಗಿದ ನಂತರ ಗಾಝಾದಲ್ಲಿ ಅನಿರ್ದಿಷ್ಟ ಅವಧಿಗೆ ಭದ್ರತಾ ಜವಾಬ್ದಾರಿಯನ್ನು ಇಸ್ರೇಲ್ ಹೊಂದಬಹುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡಂದಿನಿಂದ ಇಲ್ಲಿಯ ತನಕ 4,104 ಮಕ್ಕಳೂ ಸೇರಿದಂತೆ 10,000ಕ್ಕೂ ಅಧಿಕ ಮಂದಿ ಬಲಿಯಾಗಿರುವ ನಡುವೆ ನೆತನ್ಯಾಹು ಅವರ ಹೇಳಿಕೆ ಬಂದಿದೆ.
“ನನಗನಿಸುತ್ತೆ, ಅನಿರ್ದಿಷ್ಟ ಅವಧಿಗೆ ಇಸ್ರೇಲ್ ಒಟ್ಟಾರೆ ಭದ್ರತಾ ಜವಾಬ್ದಾರಿ ಹೊಂದಲಿದೆ. ಅದಿಲ್ಲದೇ ಇದ್ದಾಗ ಏನಾಗುತ್ತದೆ ಎಂಬುದನ್ನು ನೋಡಿದ್ದೇವೆ. ಅದು ಹಮಾಸ್ ನಾವು ಊಹಿಸದಷ್ಟು ಬೆಳೆಯಲು ಕಾರಣವಾಗಿದೆ,” ಎಂದು ಅವರು ಹೇಳಿದರು.
“ನಮ್ಮ ಒತ್ತೆಯಾಳುಗಳ ಬಿಡುಗಡೆಯಾಗದೆ ಕದನವಿರಾಮ ಇರುವುದಿಲ್ಲ. ತಂತ್ರಗಾರಿಕೆಯ ವಿರಾಮಗಳು, ಒಂದು ಗಂಟೆಯಷ್ಟು ಇರಬಹುದು. ಹಿಂದೆಯೂ ಇತ್ತು. ಮಾನವೀಯ ಉದ್ದೇಶದ ಸರಕುಗಳ ಸಾಗಾಟಕ್ಕೆ ಅನುವು ಮಾಡಲು ಹಾಗೂ ನಮ್ಮ ಒತ್ತೆಯಾಳುಗಳ ಬಿಡುಗಡೆ ಕುರಿತಂತೆ ಪರಿಸ್ಥಿತಿ ಪರಿಶೀಲಿಸುವೆ,” ಎಂದು ನೆತನ್ಯಾಹು ಹೇಳಿದರು.