Mysore
19
clear sky

Social Media

ಗುರುವಾರ, 29 ಜನವರಿ 2026
Light
Dark

ಇಸ್ರೇಲ್‍ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ 235 ಭಾರತೀಯರು

ನವದೆಹಲಿ : ಯುದ್ಧಪೀಡಿತ ಇಸ್ರೇಲ್‍ನಲ್ಲಿ ಸಿಲುಕಿಕೊಂಡಿದ್ದ 235 ಮಂದಿ ಭಾರತೀಯರು ಇಂದು ತಾಯ್ನಾಡಿಗೆ ಮರಳಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್‍ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಅಜಯ್ ಕಾರ್ಯಾಚರಣೆಯನ್ನು ಆರಂಭಿಸಿದೆ.

ನಿನ್ನೆಯಷ್ಟೇ ಇಸ್ರೇಲ್‍ನಿಂದ 230 ಮಂದಿ ಭಾರತೀಯರು ಆಗಮಿಸಿದ್ದರು. ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ 235 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದ ವಿಮಾನವು ಮುಂಜಾನೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಆಗಮಿಸಿತು.

ಭಾರತಕ್ಕೆ ಬಂದವರಲ್ಲಿ ಒಂಬತ್ತು ಮಂದಿ ಕನ್ನಡಿಗರು ಸೇರಿದ್ದಾರೆ. ಇದರಲ್ಲಿ ಮೈಸೂರಿನ ಐವರು ಹಾಗೂ ಬೆಂಗಳೂರಿನ ಬಸವನಗುಡಿಯ ನಾಲ್ಕು ಮಂದಿ ಸೇರಿದ್ದಾರೆ. ತಾಯ್ನಾಡಿಗೆ ಬಂದ ಭಾರತೀಯರನ್ನು ಕೇಂದ್ರ ಸಚಿವ ರಾಜಕುಮಾರ್ ರಾಜನ್‍ಸಿಂಗ್ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಸ್ವದೇಶಕ್ಕೆ ಬಂದ ಭಾರತೀಯರು ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ವೇಳೆ ಕೆಲವರು ಭಾವುಕರಾಗಿ ತಮ್ಮ ಪೋಷಕರು ಮತ್ತು ಸಂಬಂಕರನ್ನು ನೋಡುತ್ತಿದ್ದಂತೆ ಕಂಬನಿ ಮಿಡಿದರು. ನಾವು ಪುನಃ ನಮ್ಮ ದೇಶಕ್ಕೆ ಬರುತ್ತೇವೆಂಬ ನಂಬಿಕೆಯನ್ನೇ ಇಟ್ಟುಕೊಂಡಿರಲಿಲ್ಲ. ಅಲ್ಲಿನ ಪರಿಸ್ಥಿತಿ ನಿಜಕ್ಕೂ ಕ್ಷಣಕ್ಷಣಕ್ಕೂ ಭೀಕರವಾಗಿದೆ. ಬದುಕುತ್ತೇವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು. ಕೇಂದ್ರ ಸರ್ಕಾರ ಆಪರೇಷನ್ ಅಜಯ್ ದ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕೇಂದ್ರ ಸರ್ಕಾರಕ್ಕೆ ನಾವು ಎಷ್ಟು ಅಭಿನಂದನೆ ಸಲ್ಲಿಸಿದರೂ ಸಾಲದು. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಾವು ಸುರಕ್ಷಿತವಾಗಿ ಬಂದಿದ್ದೇವೆ ಎಂದರೆ ಅಚ್ಚರಿಯೇ ಸರಿ. ನಮಗೆ ಕುಡಿಯಲು ಒಂದಿಷ್ಟು ನೀರು, ಹಣ್ಣು ಬಿಟ್ಟರೆ ಏನೂ ಸಿಗುತ್ತಿರಲಿಲ್ಲ. ಸರಿಯಾದ ಸಮಯಕ್ಕೆ ಕೇಂದ್ರ ಸರ್ಕಾರ ನಮ್ಮನ್ನು ಕರೆಸಿಕೊಂಡಿದೆ. ಇದಕ್ಕಾಗಿ ನಾವು ಸದಾ ಕೃತಜ್ಞತರಾಗಿರುತ್ತೇವೆ ಎಂದು ಅನೇಕರು ಭಾವುಕರಾಗಿ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!