- ಪ್ರೊ.ಆರ್.ಎಂ.ಚಿಂತಾಮಣಿ
1972ರಲ್ಲಿ ಸುಪ್ರಸಿದ್ಧ ಇಂಗ್ಲಿಷ್ ವಾರಪತ್ರಿಕೆ ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ದೇಶದಲ್ಲಿಯೇ ವಿವಿಧ ಜನಾಂಗಗಳ ಪರಿಚಯ ಲೇಖನಗಳನ್ನು ಪ್ರಕಟಿಸುತ್ತಿತ್ತು. ಒಂದು ವಾರ ‘ಲಿಂಗಾಯತ್ ಆಫ್ ಕರ್ನಾಟಕ’ ಪ್ರಕಟವಾಗಿತ್ತು. ಅದರಲ್ಲಿ ಲಿಂಗಾಯತ ಮಠಗಳ ಸ್ವಾಮಿಗಳು ಸಮಾಜದ ಎಲ್ಲ ಜನಾಂಗಗಳ ಬಡ ಮಕ್ಕಳ ಏಳಿಗೆಗಾಗಿ ಫ್ರೀ ಹಾಸ್ಟೆಲ್ ಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದನ್ನು ದಾಖಲಿಸಲಾಗಿತ್ತು. ಮೈಸೂರು ಪ್ರದೇಶದಲ್ಲಿ ಜಗದ್ಗುರುಗಳೊಬ್ಬರು ಮೈಸೂರು ನಗರ, ಹಳ್ಳಿ ಮತ್ತು ಪಟ್ಟಣಗಳಲ್ಲಿ ಫ್ರೀ ಬೋರ್ಡಿಂಗ್/ ಹಾಸ್ಟೆಲ್‌ಗಳನ್ನು, ವಿದ್ಯಾಸಂಸ್ಥೆಗಳನ್ನು ತೆರೆದು ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲ ಅರ್ಹ ಬಡ ಮಕ್ಕಳಿಗೆ ಎಲ್ಲ ರೀತಿಯ ಸಹಾಯಗಳನ್ನೂ ಮಾಡುತ್ತಿರುವುದನ್ನು ಹೊಗಳಲಾಗಿತ್ತು. ಅವರ ಭಾವಚಿತ್ರವೂ ಇತ್ತು. ಅವರೇ ಸುತ್ತೂರು ವೀರಸಿಂಹಾಸನ ಶ್ರೀಮಠದ 23ನೇ ಜಗದ್ಗುರು ರಾಜಗುರು ತಿಲಕ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು.
22ನೇ ಗುರುಗಳಾದ ಮಂತ್ರ ಮಹರ್ಷಿ ಶಿವರಾತ್ರೀಶ್ವರರ ಮಾರ್ಗದರ್ಶನದಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರರ ಪರಂಪರೆಯ ಸಮಾಜೋದ್ಧಾರದ ಕಾರ್ಯಗಳು ಮುಂದುವರಿದಿದ್ದವು. ಮಠದ ಕಾರಭಾರಿಗಳಾಗಿದ್ದ ಮಲ್ಲಿಕಾರ್ಜುನ ದೇವರು ಮತ್ತು ಪುಣ್ಯ ಕಾಯಕದ ಫಲವಾಗಿ ಅವರ ಧರ್ಮಪತ್ನಿ ಶಂಕರಮ್ಮನವರು 29 ಆಗಸ್ಟ್ 1915ರಂದು ಗಂಡು ಶಿಶುವಿಗೆ ಜನ್ಮಕೊಟ್ಟರು. ಇಲ್ಲೊಂದು ವಿಶೇಷ ಘಟನೆಯನ್ನು ಹೇಳಲೇಬೇಕು. ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಜಗದ್ಗುರುಗಳು ನಿಮಗೆ ಲೋಕೋದ್ಧಾರಕ ಪುಣ್ಯಪುರುಷ ಹುಟ್ಟುತ್ತಾನೆ. ಐದು ವರ್ಷಗಳವರೆಗೆ ಪೋಷಿಸಿ ಅವನನ್ನು ಮಠಕ್ಕೆ ಅರ್ಪಿಸಬೇಕು’ ಎಂದು ಗುರುವಾಣಿ ನುಡಿದಿದ್ದರು. ಅವರ ಆಶಯದಂತೆ ಮಗುವಿಗೆ ‘ರಾಜೇಂದ’ ಎಂದು ಹೆಸರಿಡಲಾಯಿತು. ಐದು ವರ್ಷಗಳ ನಂತರ ಗುರುಗಳ ಆದೇಶದಂತೆ ಮಗುವನ್ನು ಮಠಕ್ಕೆ ಅರ್ಪಿಸಲಾಯಿತು.
ಅಂದಿನಿಂದ ಎಳೆಯ ಬಾಲಕ ರಾಜೇಂದ್ರರು ನೆರಳಿನಂತೆ ಜಗದ್ಗುರುಗಳ ಹಿಂದೆಯೆ ಸುತ್ತುತ್ತ ಅವರಿಂದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳತೊಡಗಿದರು. ವಿದ್ಯಾಭ್ಯಾಸದ ಮೊದಲ ಪಾಠವು ಅವರಿಂದಲೇ, ಮುಂದೆ ಇವರ ಅಧ್ಯಯನ ಮೈಸೂರಿನಲ್ಲಿ ಮುಂದುವರಿಯಿತು. ಸಂಸ್ಕೃತದೊಡನೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನೂ ಕಲಿತು ಪ್ರಾವೀಣ್ಯತೆ ಪಡೆದರು. ಈಗಲೇ ಜಗದ್ಗುರು ಪಟ್ಟಾಭಿಷೇಕ ಮಾಡಿದರೆ ಮುಂದಿನ ಆಧ್ಯಾತ್ಮಿಕ ಅಧ್ಯಯನ ಮತ್ತು ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂಬ ಜಗದ್ಗುರುಗಳ ಸಂಕಲ್ಪದಂತೆ 24-02-1928ರಂದು ಪಟ್ಟಾಧಿಕಾರವು ಅದ್ದೂರಿಯಾಗಿ ನಡೆಯಿತು. 12 ವರ್ಷದ ಬಾಲಕ 23ನೆಯ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಾದರು. ಆಗ ಇವರು ಭಕ್ತರ ಬಾಯಲ್ಲಿ ‘ಚಿಕ್ಕ ಬುದ್ಧಿ’ಯವರೆಂದೇ ಕರೆಯಲ್ಪಡುತ್ತಿದ್ದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮತ್ತು ಆಧ್ಯಾತ್ಮಿಕ ತರಬೇತಿ ಮುಂದುವರಿದಿದ್ದವು. ಕ್ಯಾತನಹಳ್ಳಿ ಸಾಹುಕಾರ ಸಿದ್ಧಲಿಂಗಪ್ಪನವರು ಕಟ್ಟಿಸಿ ಮಠಕ್ಕೆ ಕೊಟ್ಟಿದ್ದ ಅಗ್ರಹಾರದಲ್ಲಿರುವ ಸಂಸ್ಕೃತ ಪಾಠಶಾಲೆ ಮತ್ತು ವಿದ್ಯಾರ್ಥಿನಿಲಯದಲ್ಲಿ ಸ್ವಾಮಿಗಳ ವಾಸ್ತವ್ಯ ಮತ್ತು ಅಧ್ಯಯನ.
ಮೈಸೂರು ಕಾರ್ಯಕ್ಷೇತ್ರ: ನಿರ್ಧಾರ ಕಾಶಿಯಲ್ಲಿ
ಮೊದಲಿನಿಂದಲೂ ತಾವು ಕಾಶಿಯಲ್ಲಿ ಮೈಸೂರಿನವರೇ ಆದ ಪ್ರಕಾಂಡ ಪಂಡಿತರೂ ಕಾಶಿ ವಿದ್ಯಾಪೀಠದಲ್ಲಿ ಪ್ರಾಧ್ಯಾಪಕರೂ ಆಗಿದ್ದ ಗೌರಿಶಂಕರ ಸ್ವಾಮಿಗಳಲ್ಲಿ ಅಧ್ಯಯನ ಮಾಡಬೇಕೆಂಬ ಉತ್ಕಟ ಆಸೆ ರಾಜೇಂದ್ರ ಸ್ವಾಮಿಗಳಲ್ಲಿತ್ತು. ಅದೇ ರೀತಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಇಚ್ಛೆಯೂ ಬಲವಾಗಿತ್ತು.
ಒಂದು ದಿನ ಗುರುಗಳಿಗೂ ಹೇಳದೆ ಕಾಶಿಗೆ ಹೊರಟೇಬಿಟ್ಟರು. ಕಾಶಿಯಲ್ಲಿ ಇವರನ್ನು ಗೌರಿಶಂಕರ ಸ್ವಾಮಿಗಳು ಸಂತೋಷ ಮತ್ತು ಆಶ್ಚರ್ಯದೊಡನೆ ಆದರ ಪೂರ್ವಕವಾಗಿ ಸ್ವಾಗತಿಸಿದರು. ವಿಶ್ರಾಂತಿಯ ನಂತರ ನಿಧಾನವಾಗಿ ಬಂದ ಉದ್ದೇಶವನ್ನು ಕೇಳಿ ತಿಳಿದುಕೊಂಡರು. ಸ್ವಲ್ಪ ಹೊತ್ತು ಅಂತರ್ಮುಖಿಯಾದರು. ನಂತರ ಅವರು ನಿಮ್ಮ ಗುರಿಯೇನೋ ಸರಿ. ನಿಮ್ಮಲ್ಲಿ ಅಗಾಧವಾದ ಪ್ರತಿಭೆ ಮತ್ತು ಶಕ್ತಿಯನ್ನು ಗುರುತಿಸಿದ್ದೇನೆ.
ಇಲ್ಲಿ ನೀವು ಓದಿದರೆ ನೀವೊಬ್ಬರೇ ದೊಡ್ಡವರಾಗುತ್ತೀರಿ. ದಾರ್ಶನಿಕರಾಗುತ್ತೀರಿ. ನಿಮ್ಮಿಂದ ಲಕ್ಷಾಂತರ ಜನರು ದೊಡ್ಡವರಾಗಬೇಕಾಗಿದೆ. ನಿಮ್ಮ ಮನದಾಳದ ಆಶಯದಂತೆ ಮೈಸೂರಿಗೆ ಹೋಗಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸಗಳನ್ನು ಕೈಗೊಳ್ಳುತ್ತ ನಿಮ್ಮ ಅಧ್ಯಯನ ಮುಂದುವರಿಸಿರಿ. ಇದಕ್ಕೆ ನನ್ನ ಬೆಂಬಲವೂ ಇರುತ್ತದೆ. ಗುರುಗಳೂ ಒಪ್ಪುತ್ತಾರೆ’ ಎಂದು ಗಂಭೀರ ಧ್ವನಿಯಲ್ಲಿ ಹೇಳಿದರು.
ರಾಜೇಂದ್ರ ಸ್ವಾಮಿಗಳಿಗೂ ಇದು ಒಪ್ಪಿಗೆಯಾಯಿತು. ಅಷ್ಟರಲ್ಲಿ ಜಗದ್ಗುರುಗಳು ಇವರನ್ನು ಹುಡುಕಿಕೊಂಡು ಅಲ್ಲಿಗೆ ಬಂದಿದ್ದರು. ಖಚಿತ ನಿರ್ಧಾರದೊಡನೆ ಗುರುಗಳೊಡನೆ ರಾಜೇಂದ್ರರು ಮೈಸೂರಿಗೆ ಮರಳಿದರು.
ಮೈಸೂರಿನಲ್ಲಿ ಫ್ರೀ ಹಾಸ್ಟೆಲ್ ಆರಂಭ
ನಿರ್ಧಾರವೇನೋ ಆಯಿತು. ಏನು ಮಾಡಬೇಕು, ಹೇಗೆ ನಿಭಾಯಿಸಬೇಕು, ಸಂಪನ್ಮೂಲಗಳನ್ನು ಹೇಗೆ ಕ್ರೋಢೀಕರಿಸುವುದು, ಗುರುಗಳನ್ನು ಹೇಗೆ ಒಪ್ಪಿಸುವುದು… ಹೀಗೆಲ್ಲ ಯೋಚಿಸುತ್ತಿರುವಾಗಲೇ ಕ್ಯಾತನಹಳ್ಳಿ ಪಾಠ ಶಾಲೆಯ ಮುಂದಿನ ಕಟ್ಟೆಯ ಮೇಲೆ ನಿತ್ರಾಣವಾಗಿ ಮಲಗಿದ್ದ ಬಡ ವಿದ್ಯಾರ್ಥಿಯೊಬ್ಬನ ಘಟನೆ ನಡೆಯಿತು. ಅವನನ್ನು ಉಪಚರಿಸಿ ಅವನ ಕರುಣ ಕಥೆಯನ್ನು ಕೇಳಿದ ನಂತರ ಮಹಾಸ್ವಾಮಿಗಳು ಮೈಸೂರಿನಲ್ಲಿ ಓದುತ್ತಿದ್ದ ಹಳ್ಳಿಗಳ ಬಡ ವಿದ್ಯಾರ್ಥಿಗಳಿಗಾಗಿ ಕೂಡಲೆ, ಒಂದು ಫ್ರೀ ಹಾಸ್ಟೆಲ್ ಆರಂಭಿಸಲೇಬೇಕೆಂಬ ನಿರ್ಧಾರಕ್ಕೆ ಬಂದರು. ಆದರೆ ಅದಕ್ಕಾಗಿ ಹಣ ಹೊಂದಿಸುವುದು ಹೇಗೆ?
ತಕ್ಷಣ ಅವರ ಕಣ್ಣಿಗೆ ಬಿದ್ದದ್ದು ತಮ್ಮ ಚಿನ್ನದ ಕರಡಿಗೆ, ಚಿನ್ನಲೇಪಿತ ರುದ್ರಾಕ್ಷಿ ಮಾಲೆ ಮತ್ತು ತಮಗೆ ಪಟ್ಟಾಧಿಕಾರದಲ್ಲಿ ಹಾಕಿದ ಚಿನ್ನದ ಉಂಗುರ, ಈ ಉಂಗುರ ಮತ್ತು ರುದ್ರಾಕ್ಷಿ ಜೊತೆಗಿದ್ದ ಚಿನ್ನವನ್ನು ಮಾರಿ ಒಂದು ಮನೆಯನ್ನು ಬಾಡಿಗೆಗೆ ಪಡೆದು 12 ಬಡ ವಿದ್ಯಾರ್ಥಿಗಳೊಡನೆ 19-9-1941ರಂದು ಅರಮನೆಯ ಹುಜೂರ ಕಾರ್ಯದರ್ಶಿ ಕೆ.ಗುರು ದತ್ತ ಅಧ್ಯಕ್ಷತೆಯ ಸಮಾರಂಭದಲ್ಲಿ ಫ್ರೀ ಹಾಸ್ಟೆಲ್ ಆರಂಭ ಮಾಡಿದರು. ಗುರುಗಳ ಈ ಸಾಹಸ ಕಂಡ ಭಕ್ತರು ಹಣ, ದವಸ- ಧಾನ್ಯ ತಂದುಕೊಟ್ಟರು. ಹಿರಿಯ ಜಗದ್ಗುರುಗಳು ಇವರ ಸತ್ಕಾರ್ಯ ಕಂಡು ಮನದಲ್ಲೇ ಸಂತಸಪಟ್ಟರೂ ಮೇಲೆ ಗಂಭೀರವಾಗಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯಿತು. 1946ರಲ್ಲಿ ಒಂದು ದಿನ ಹಿರಿಯ ಜಗದ್ಗುರುಗುರು ಗಳು ಭಕ್ತರೊಡನೆ ಬಂದು ವಾಣಿವಿಲಾಸ ರಸ್ತೆಯಲ್ಲಿರುವ (ಆರ್.ಟಿ.ಒ. ಕಚೇರಿ ಪಕ್ಕ) ಮೂರಂತಸ್ತಿನ ಕಟ್ಟಡ ಮತ್ತು ಸುತ್ತಲಿನ ಜಾಗವನ್ನು ಖರೀದಿಸಿ ಹಾಸ್ಟೆಲ್‌ನ್ನು ಅಲ್ಲಿಗೆ ವಿಸ್ತರಿಸಲು ಆದೇಶವಿತ್ತರು. ಅಲ್ಲಿಂದ ಸ್ವಾಮಿಗಳು ಹಿಂತಿರುಗಿ ನೋಡಿದ್ದೇ ಇಲ್ಲ. ಅದೇ ಇಂದು ಜೆ.ಎಸ್.ಎಸ್. ಮೇನ್ ಬಿಲ್ಡಿಂಗ್ ಎಂದು ಹೆಸರಾಗಿದೆ. ಅಷ್ಟರಲ್ಲಿ ಭಕ್ತರ ಬೇಡಿಕೆ ಮೇರೆಗೆ ಗ್ರಾಮೀಣ ಶಾಲೆಗಳ ಬಡಮಕ್ಕಳಿಗೆ ಅನುಕೂಲವಾಗಲೆಂದು 1944ರಲ್ಲಿ ತಿ.ನರಸೀಪುರದಲ್ಲಿ ಮತ್ತು 1945ರಲ್ಲಿ ನಂಜನಗೂಡಿನಲ್ಲಿ ಫ್ರೀ ಹಾಸ್ಟೆಲ್ ಗಳು ಆರಂಭವಾಗಿ ನಡೆಯುತ್ತಿದ್ದವು.
ಇನ್ನೊಂದು ಪ್ರೌಢಶಾಲೆಯ ಅವಶ್ಯಕತೆಯನ್ನು ಪರಿಗಣಿಸಿ 1948ರಲ್ಲಿ ರಾಮಾನುಜ ರಸ್ತೆಯಲ್ಲಿ ಆನೆ ಕರೋಟಿ ಕಟ್ಟಡದಲ್ಲಿ ಮೊದಲ ಜೆಎಸ್‌ಎಸ್ ಪ್ರೌಢಶಾಲೆ ಆರಂಭಿಸಲಾಯಿತು. 1958ರಲ್ಲಿ ಚಾಮರಾಜನಗರದಲ್ಲಿ ಪ್ರೌಢಶಾಲೆ ತೆರೆಯಲಾಯಿತು. ಅವಶ್ಯಕತೆಯಂತೆ ಮತ್ತು ಭಕ್ತರ ಸಹಕಾರದೊಂದಿಗೆ ಹಳ್ಳಿ ಪಟ್ಟಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುರುಕುಲದಿಂದ ಹಿಡಿದು ಪ್ರೌಢಶಾಲೆಗಳವರೆಗೆ ಆರಂಭವಾಗಿ ಬೆಳೆದವು. ಎಲ್ಲ ಸಂಸ್ಥೆಗಳಲ್ಲಿ ಯಾವುದೇ ಭೇದಭಾವವಿಲ್ಲದೇ ಎಲ್ಲ ಮಕ್ಕಳಿಗೂ ಅವಕಾಶವಿತ್ತು.
1960ರ ದಶಕದಲ್ಲಿ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಅಲ್ಲದೆ, ಮೈಸೂರು, ಚಾಮರಾಜನಗರ ಮತ್ತು ನಂಜನಗೂಡಿನಲ್ಲಿ ಪದವಿ ಕಾಲೇಜುಗಳೂ ಆರಂಭವಾದವು. ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಸಮರ್ಥ ನಿರ್ವಹಣೆಗಾಗಿ 1964ರಲ್ಲಿ ಜೆ.ಎಸ್.ಎಸ್. ಮಹಾವಿದ್ಯಾಪೀಠವೆಂಬ ಕೇಂದ್ರ ಸಂಸ್ಥೆ ಆರಂಭವಾಯಿತು.
1980ರ ದಶಕದ ಹೊತ್ತಿಗೆ ಮಹಾಸ್ವಾಮಿಗಳು ಸ್ಥಾಪಿಸಿದ ಸಂಸ್ಥೆಗಳ ಕಾರ್ಯವ್ಯಾಪ್ತಿ ಹೊರ ರಾಜ್ಯಗಳಿಗಲ್ಲದೆ ಹೊರ ದೇಶಗಳಿಗೂ ವ್ಯಾಪಿಸಿತ್ತು. ಗೊತ್ತಿರುವ ಇತಿಹಾಸವಾದ್ದರಿಂದ ವಿವರ ಹೇಳಬೇಕಾಗಿಲ್ಲ.
ಇಲ್ಲಿ ಓದಿದ ಬಹಳಷ್ಟು ಜನ ಕುಲಪತಿ ಸ್ಥಾನಗಳನ್ನೂ, ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಗಳನ್ನೂ ಅಲಂಕರಿಸಿದ್ದಾರೆ. 1986ರ ಜೂನ್ 29ರಿಂದ ಮಹಾಸ್ವಾಮಿಗಳು ವಿದೇಶ ಪ್ರವಾಸವನ್ನೂ ಕೈಗೊಂಡು ಅಲ್ಲಿಯ ಭಕ್ತರು ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ದರ್ಶನ ಆಶೀರ್ವಾದ ಕೊಟ್ಟು ಬಂದಿದ್ದರು.
ತಾಯಿ ಹೃದಯದ ಕರುಣಾಮಯಿ |
ರಾಜೇಂದ್ರ ಸ್ವಾಮಿಗಳು ಎಷ್ಟು ಪ್ರೀತಿಯಿಂದ ಮಕ್ಕಳಿಗೆ ಊಟ ಮಾಡಿಸುತ್ತಿದ್ದರೋ ಅಷ್ಟೇ ಕಠಿಣವಾಗಿ ಶಿಸ್ತನ್ನೂ ಕಲಿಸುತ್ತಿದ್ದರು. ಅಂತಹ ತಾಯಿ ಹೃದಯಿ ಅವರದು. ಆರಂಭದ ದಿನಗಳಲಿ ಒಮ್ಮೊಮ್ಮೆ ಹಾಸ್ಟೆಲ್‌ಗಳಿಗೆ ಆಹಾರ ಧಾನ್ಯ ಪೂರೈಕೆ ಕಷ್ಟವಾಗುತ್ತಿತ್ತು. ಆಗ ಮಕ್ಕಳಿಗೆ ಆಹಾರ ಕಡಿಮೆಯಾಗಿದೆ ಎಂದು ತಾವೇ ಉಪವಾಸ ಮಲಗಿದ್ದುಂಟು. 1960ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆದ ಘಟನೆ ಹೀಗಿದೆ: ಆ ದಿನ ಯಾವ ಆಹಾರ ಧಾನ್ಯಗಳೂ ಇರಲಿಲ್ಲ. ಸಂಜೆ ಊಟಕ್ಕೆ ಏನೂ ಇರಲಿಲ್ಲ. ಮಠಕ್ಕೆ ತಿಳಿಸಲಾಗಿತ್ತು. ಮಹಾಸ್ವಾಮಿಗಳು ಬೆಳಿಗ್ಗೆಯೇ ಬಂದು ಹಳ್ಳಿಗಳಿಗೆ ಹೋಗಿ ಭಕ್ತರಿಂದ ತರುತ್ತೇನೆ ಎಂದು ಹೋದರೆ ಅಂದು ಏನೂ ಸಿಗಲಿಲ್ಲ. ಸ್ವಾಮಿಗಳು ಹಾಸ್ಟೆಲ್‌ಗೆ ಬಂದು ಮ್ಯಾನೇಜರ್ ಗುರುಸಿದ್ದಪ್ಪನವರ ಕೈಯಲ್ಲಿ ತಮ್ಮಲ್ಲಿದ್ದ ಐದು ರೂ.ಗಳನ್ನು ಕೊಟ್ಟು ಕಡ್ಲೆಪುರಿ ತಂದು ಮಕ್ಕಳಿಗೆ ತಿನ್ನಿಸಿ ಮಲಗಿಸಿ. ಬೆಳಿಗ್ಗೆಯೇ ಎಲ್ಲ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿ ಹೋಗಿ ಮಂಡಿಗಳಲ್ಲಿ ಸಾಲವಾಗಿ ಎಲ್ಲವನ್ನೂ ಖರೀದಿಸಿ ಬೆಳಗಾಗುವಷ್ಟರಲ್ಲಿ ಹಾಸ್ಟೆಲ್‌ಗೆ ತಲುಪಿಸಿದ್ದರು. ಅಂದು ರಾತ್ರಿ ಸ್ವಾಮಿಗಳಿಗೆ ಪೂಜೆಯೂ ಇಲ್ಲ. ಪ್ರಸಾದವೂ ಇಲ್ಲ. ಉಪವಾಸ ಮಲಗಿದ್ದರು. ಮರುದಿನ ಬೆಳಿಗ್ಗೆ ಮಕ್ಕಳು ತಿಂಡಿ ತಿಂದು ಸ್ಕೂಲಿಗೆ ಹೋದರೆಂದು ಗೊತ್ತಾದ ನಂತರವೇ ಅವರ ಸ್ನಾನ, ಪೂಜೆ ಮತ್ತು ಪ್ರಸಾದ. ಇಂತಹ ಎಷ್ಟೋ ಘಟನೆಗಳನ್ನು ಬರೆದರೆ ಅದೇ ಒಂದು ಪುಸ್ತಕವಾಗುತ್ತದೆ. ಅವರ ನೆನಪಿನ ಶಕ್ತಿ ಎಷ್ಟಿತ್ತೆಂದರೆ ಒಮ್ಮೆ ಭೇಟಿಯಾದವರು ಮತ್ತೊಮ್ಮೆ ಎಷ್ಟೋ ವರ್ಷಗಳ ನಂತರ ಬಂದರೂ ಅವರನ್ನು ಹೆಸರು ಹಿಡಿದು ಕರೆದು ವಿಚಾರಿಸುತ್ತಿದ್ದರು. ಇಂತಹ ವಿಶಾಲ ಹೃದಯದ ಕರುಣಾಮಯಿ ಡಿಸೆಂಬರ್ 06, 1986ರಂದು ಮಠ ಮತ್ತು ಸಂಸ್ಥೆಗಳನ್ನು ಮುಂದಿನ ಜಗದ್ಗುರುಗಳಾಗಲಿರುವ ದೇಶಿಕೇಂದ್ರ ಸ್ವಾಮಿಗಳಿಗೆ ಒಪ್ಪಿಸಿ ತಮ್ಮ ಇಹಲೋಕದ ಮಣಿಹ ಮುಗಿಯಿತೆಂದು ದೇಹತ್ಯಾಗ ಮಾಡಿ ಆದಿ ಜಗದ್ಗುರುಗಳನ್ನು ಸೇರಿಕೊಂಡರು.