‘ಯುವ’ ಚಿತ್ರದ ನಂತರ ಯುವ ರಾಜಕುಮಾರ್ ಅಭಿನಯದ ಮುಂದಿನ ಚಿತ್ರ ಯಾವುದು, ಯಾರು ನಿರ್ಮಿಸುತ್ತಾರೆ, ಯಾರು ನಿರ್ದೇಶನ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ, ಎರಡನೇ ಚಿತ್ರಕ್ಕಿಂತ ಯುವ ಡೈವೋರ್ಸ್ ಪ್ರಕರಣ ಮುನ್ನಲೆಗೆ ಬಂದು, ಮಿಕ್ಕಿದ್ದೆಲ್ಲವೂ ಹಿಂದೆ ಸರಿಯಿತು. ಇದೀಗ ದಸರಾ ಸಂದರ್ಭದಲ್ಲಿ ಯುವ ಅಭಿನಯದ ಎರಡನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ.
ಸದ್ಯಕ್ಕೆ ಈ ಚಿತ್ರಕ್ಕೆ ‘ಯುವ 02’ ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರವನ್ನು ಕನ್ನಡದ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳಾದ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಮತ್ತು KRG ಸ್ಟುಡಿಯೋಸ್ ಜೊತೆಯಾಗಿ ನಿರ್ಮಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್, ಜಯಣ್ಣ, ಭೋಗೇಂದ್ರ, ಕಾರ್ತಿಕ್ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
ಸದ್ಯ ‘ಉತ್ತರಕಾಂಡ’ ಚಿತ್ರವನ್ನು ನಿರ್ದೇಶಿಸುತ್ತಿರುವ ರೋಹಿತ್ ಪದಕಿ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈಗ ಚಿತ್ರದ ಘೋಷಣೆಯಾಗಿದ್ದು, ರಾಜ್ಯೋತ್ಸವದ ಅಂಗವಾಗಿ ನವೆಂಬರ್.1ರಂದು ಚಿತ್ರದ ಮೊದಲ ನೋಟ ಮತ್ತು ಶೀರ್ಷಿಕೆ ಘೋಷಣೆಯಾಗಲಿದೆ.
ಈ ಚಿತ್ರಕ್ಕೆ ‘Sins aren’t always Red’ ಎಂಬ ಅಡಿ ಬರಹವಿದ್ದು, ಮೇಲ್ನೋಟಕ್ಕೆ ಇದೊಂದು ಗ್ಯಾಂಗ್‍ಸ್ಟರ್ ಚಿತ್ರ ಎಂದೆನಿಸಬಹುದು. ಇದೊಂದು ಫ್ಯಾಮಿಲಿ ಚಿತ್ರವಾಗಿದ್ದು, ಇದನ್ನು ತಮ್ಮ ಶೈಲಿಯಲ್ಲೇ ಹೇಳುತ್ತಿರುವುದಾಗಿ ರೋಹಿತ್ ಪದಕಿ ಹೇಳಿಕೊಂಡಿದ್ದಾರೆ. ಒಂದೊಳ್ಳೆಯ ಕುಟುಂಬದಿಂದ ಬಂದ ಹುಡುಗನೊಬ್ಬ ಯಾಕಾಗಿ ಕತ್ತಿ ಹಿಡಿಯುತ್ತಾನೆ ಎನ್ನುವುದು ಚಿತ್ರದ ಕಥೆಯಂತೆ.
ಸದ್ಯ ಚಿತ್ರದ ನಿರ್ಮಾಣ ಸಂಸ್ಥೆಗಳ ಮತ್ತು ನಿರ್ದೇಶಕರ ಹೆಸರನ್ನು ಮಾತ್ರ ಘೋಷಿಸಲಾಗುತ್ತಿದೆ. ಮಿಕ್ಕಂತೆ ಚಿತ್ರದ ಹೆಚ್ಚಿನ ವಿವರಗಳಿಗಾಗಿ ರಾಜ್ಯೋತ್ಸವದವರೆಗೂ ಕಾಯಬೇಕಿದೆ.