Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ಸುಳ್ಳು ಲೆಕ್ಕ ಕೊಟ್ಟು ನಮಗೆ ನಾವೇ ಮೋಸ ಮಾಡಿಕೊಳ್ತಿದ್ದೀವಿ: ಗಣೇಶ್‍

ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರವು ಆಗಸ್ಟ್ 15ರಂದು ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ ಹಲವು ಪ್ರದರ್ಶನಗಳು ಹೌಸ್‍ಫುಲ್ ಆಗಿವೆ. ಮೊದಲ ನಾಲ್ಕು ದಿನಗಳ ಲೆಕ್ಕಾಚಾರದಲ್ಲಿ ಎಷ್ಟು ಕಲೆಕ್ಷನ್‍ ಆಗಿರಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಕುರಿತು ಮಾತನಾಡುವ ಗಣೇಶ್‍, ಎರಡು ವಾರಗಳ ನಂತರ ಸರಿಯಾಗಿ ಲೆಕ್ಕ ಕೊಡುವುದಾಗಿ ಹೇಳುತ್ತಾರೆ.

ಇತ್ತೀಚೆಗೆ, ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡದವರು ಒಂದು ಸಂತೋಷಕೂಟ ಆಯೋಜಿಸಿ, ಚಿತ್ರ ಗೆದ್ದ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಗಣೇಶ್‍ ಹಲವು ವಿಷಯಗಳನ್ನು ಮಾತನಾಡಿದರು.

ಈ ಕುರಿತು ಮಾತನಾಡಿರುವ ಗಣೇಶ್‍, ‘ಮೊದಲ ಮೂರು ದಿನಗಳ ಕಾಲ ಪ್ರೇಕ್ಷಕರು ದೊಡ್ಡ ರೀತಿಯಲ್ಲಿ ಬಂದು ಚಿತ್ರ ನೋಡಿ ಇಷ್ಟಪಟ್ಟಿದ್ದಾರೆ. ಸೋಮವಾರದ ನಂತರ ಇನ್ನೂ ಜಾಸ್ತಿ ಆಗಬಹುದು ಎಂಬ ನಿರೀಕ್ಷೆ ಇದೆ. ಹೆಚ್ಚು ಚಿತ್ರಗಳು ಬಿಡುಗಡೆಗೆ ಇದ್ದರಿಂದ ನಮಗೆ ಹೆಚ್ಚು ಪ್ರದರ್ಶನ ಸಿಗಲಿಲ್ಲ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಮೊದಲ ದಿನ ಐದು ಪ್ರದರ್ಶನ ಅಷ್ಟೇ ಸಿಕ್ಕಿದ್ದು, ಈಗ ಅದು 10ರವರೆಗೂ ಬಂದಿದೆ. ಚಿತ್ರದ ಕಲೆಕ್ಷನ್‍ ಎಷ್ಟು ಆಗಿರಬಹುದು ಎಂದು ಕೆಲವು ದಿನಗಳ ನಂತರ ಅಧಿಕೃತವಾಗಿ ಘೋಷಿಸುತ್ತೇವೆ. ನನಗೆ ಸುಳ್ಳು ಹೇಳುವುದಕ್ಕೆ ಇಷ್ಟವಿಲ್ಲ. ಸುಳ್ಳು ಹೇಳುತ್ತಾ ಹೇಳುತ್ತಾ, ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿರುತ್ತೇವೆ. ಜೊತೆಗೆ, ನೋಡುಗಿರಗೂ, ಓದುಗರಿಗೂ ಮೋಸ ಮಾಡುತ್ತಿರುತ್ತೇವೆ. ಹಾಗಾಗಿ, ಎರಡು ವಾರಗಳ ನಂತರ ಏನು ಕಲೆಕ್ಷನ್‍ ಆಯಿತು ಎಂದು ಸರಿಯಾದ ನಂಬರ್‍ ಕೊಡುತ್ತೇವೆ’ ಎಂದರು.

ಇನ್ನು, ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಗಣೇಶ್‍ ಬಹಳ ವರ್ಷಗಳ ನಂತರ ನರ್ತಕಿ ಚಿತ್ರಮಂದಿರಕ್ಕೆ ಹೋಗಿ ಪ್ರೇಕ್ಷಕರ ಜೊತೆಗೆ ಚಿತ್ರ ನೋಡಿ ಬಂದರು. ‘ಸುಮಾರು 10 ವರ್ಷವೇ ಆಗಿತ್ತು ಚಿತ್ರಮಂದಿರಕ್ಕೆ ಹೋಗಿ. ಈ ಚಿತ್ರದ ಮೇಲಿನ ನಂಬಿಕೆ ಮತ್ತು ಪ್ರೀತಿ ನೋಡಿ ಚಿತ್ರಮಂದಿರಕ್ಕೆ ಹೋದೆ. ಏಳೆಂಟು ವರ್ಷಗಳಿಂದ ನಾನು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿರಲಿಲ್ಲ. ಹಾಗಾಗಿ, ನರ್ತಕಿ ಚಿತ್ರಮಂದಿರಕ್ಕೆ ಹೋದೆ. ಖುಷಿಯಿಂದ ರಂಗಾಯಣ ರಘು ತರಹ ಡ್ಯಾನ್ಸ್ ಸಹ ಮಾಡಿದೆ’ ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀನಿವಾಸ ರಾಜು, ನಿರ್ಮಾಪಕ ಪ್ರಶಾಂತ್‍ ರುದ್ರಪ್ಪ, ರಂಗಾಯಣ ರಘು, ಶರಣ್ಯ ಶೆಟ್ಟಿ ಮುಂತಾದವರು ಹಾಜರಿದ್ದರು.

Tags: