ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ‘ಕೊತ್ತಲವಾಡಿ’ ಅಷ್ಟೇನೂ ಸದ್ದು ಮಾಡಲಿಲ್ಲ. ಈ ಚಿತ್ರದ ನಂತರ ಶರಣ್ ಅಭಿನಯದ ಚಿತ್ರವೊಂದನ್ನು ನಿರ್ಮಿಸುತ್ತಿರುವುದಾಗಿ ಪುಷ್ಪಾ ಅವರು ಈಗಾಗಲೇ ಘೋಷಿಸಿದ್ದಾರೆ. ಈ ಮಧ್ಯೆ, ಅವರು ವಿತರಣಾ ಕ್ಷೇತ್ರಕ್ಕೂ ಕಾಲಿಟಿದ್ದಾರೆ.
ನಿರ್ಮಾಪಕಿಯಾಗುವುದರ ಜೊತೆಗೆ ಇದೀಗ ವಿತರಕಿಯೂ ಆಗಿರುವ ಪುಷ್ಪಾ ಅವರು, ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಚಿತ್ರವನ್ನು ಕರ್ನಾಟಕಕ್ಕೆ ವಿತರಿಸುತ್ತಿದ್ದಾರೆ. ಈ ಚಿತ್ರವನ್ನು ಅವರು ಶ್ರೀಧರ್ ಕೃಪ ಕಂಬೈನ್ಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5ರಂದು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ.
ವಿತರಣಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಕುರಿತು ಮಾತನಾಡಿರುವ ಪುಷ್ಪಾ, ‘’ಫಾಟಿ’ ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದೆ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ. ವಿತರಕಿಯಾಗಿ ಇಟ್ಟಿರುವ ಹೊಸ ಹೆಜ್ಜೆಗೆ ಎಲ್ಲರ ಪ್ರೋತ್ಸಾಹವಿರಲಿ’ ಎಂದು ಮನವಿ ಮಾಡಿದ್ದಾರೆ.
‘ಘಾಟಿ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, UV ಕ್ರಿಯೇಷನ್ಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಾಗರ್ಲಮುಡಿ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಕ್ರಿಷ್ ಜಾಗರ್ಲಮುಡಿ ನಿರ್ದೇಶನ ಮಾಡುತ್ತಿದ್ದು, ‘ವೇದಂ’ ಯಶಸ್ಸಿನ ನಂತರ ಇದು ಅನುಷ್ಕಾ ಮತ್ತು ಕ್ರಿಷ್ ಅವರ ಎರಡನೇ ಚಿತ್ರವಾಗಿದೆ. UV ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇದು ಅನುಷ್ಕಾ ಅವರ ನಾಲ್ಕನೇ ಸಿನಿಮಾ.
ಮಾನವೀಯತೆ, ಜೀವನ ಹೋರಾಟ ಮತ್ತು ಮುಕ್ತಿಯ ಕುರಿತ ಕಥಾಹಂದರ ಹೊಂದಿರುವ ‘ಘಾಟಿ’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ವಿಕ್ರಮ್ ಪ್ರಭು, ರಮ್ಯಾ ಕೃಷ್ಣ, ಜಗಪತಿ ಬಾಬು, ಜಾನ್ ವಿಜಯ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಮನೋಜ್ ರೆಡ್ಡಿ ಕಟ್ಟಾಸನಿ ಛಾಯಾಗ್ರಹಣ, ನಾಗವಲ್ಲಿಸ ವಿದ್ಯಾ ಸಾಗರ್ ಸಂಗೀತವಿದೆ.





