ಕೋಮಲ್ ಅಭಿನಯದ ‘ನಮೋ ಭೂತಾತ್ಮ 2’ ಮತ್ತು ‘ಉಂಡೆನಾಮ’ ಚಿತ್ರಗಳು ಬಂದಿದ್ದು ಹೋಗಿದ್ದು ಗೊತ್ತಾಗಲೇ ಇಲ್ಲ. ಅವರ ಕೈಯಲ್ಲಿ ಒಂದಿಷ್ಟು ಚಿತ್ರಗಳಿದ್ದರೂ, ಅದ್ಯಾಕೋ ಅಂದುಕೊಂಡಂತೆ ಬಿಡುಗಡೆ ಆಗಲಿಲ್ಲ. ಇದೀಗ ಕೋಮಲ್ ಅಭಿನಯದ ‘ಯಲಾಕುನ್ನಿ’ ಬಿಡುಗಡೆ ದಿಢೀರ್ ಘೋಷಣೆಯಾಗಿದೆ. ಚಿತ್ರವು ಅಕ್ಟೋಬರ್.25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಕೋಮಲ್ ಸಹೋದರ ಜಗ್ಗೇಶ್, ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೋಮಲ್, ‘ಅಕ್ಟೋಬರ್.25ಕ್ಕೆ ಕೋಮಲ್ ನಟನೆಯ ‘ಯಲಾಕನ್ನಿ’ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಬಿಡುಗಡೆ. ಕೋಮಲ್ ಮುಖದಲ್ಲಿ ವಜ್ರಮುನಿರವರ ಅದ್ಭುತ ಅನಾವರಣ. ಹಾಸ್ಯ ಸಾಂಸಾರಿಕ ಚಿತ್ರ. ಹರಸಿ ಹಾರೈಸಿ’ ಎಂದು ಅವರು ವಿನಂತಿಸಿದ್ದಾರೆ.
‘ಯಲಾಕುನ್ನಿ’ ಚಿತ್ರದ ಚಿತ್ರೀಕರಣ ಮುಗಿದು ಕೆಲವು ತಿಂಗಳುಗಳಾಗಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆದರೆ, ಚಿತ್ರ ಬಿಡುಗಡೆ ಯಾವಾಗ ಎಂದು ಚಿತ್ರತಂಡ ಘೋಷಿಸಿರಲಿಲ್ಲ. ಇದೀಗ 11 ದಿನಗಳಿವೆ ಎನ್ನುವಾಗ, ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಅಕ್ಟೋಬರ್.25ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಯಲಾಕುನ್ನಿ’ ಚಿತ್ರವನ್ನು ಕೋಮಲ್, ಸಹನಾ ಮೂರ್ತಿ ಜೊತೆಗೆ ನಿರ್ಮಿಸುತ್ತಿದ್ದು, ಎನ್.ಆರ್.ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕೋಮಲ್ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ಕೋಮಲ್‍ಗೆ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ‘ಗಿಚ್ಚಿಗಿಲಿಗಿಲಿ’ಯ ಅಮೃತಾ ಬಣ್ಣ ಹಚ್ಚಿದ್ದಾರೆ.
ಕೋಮಲ್ ಜೊತೆಗೆ ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಶಿವರಾಜ್ ಕೆ.ಆರ್.ಪೇಟೆ, ತಬಲಾ ನಾಣಿ, ರಾಜು ತಾಳಿಕೋಟೆ, ಸುಮನ್ ನಗರ್‍ಕರ್, ಮಾನಸಿ ಸುಧೀರ್, ಜಯಸಿಂಹ ಮುಸುರಿ, ರಘು ರಾಮನಕೊಪ್ಪ, ಮಹಾಂತೇಶ್, ಬೌಬೌ ಜಯರಾಮ್ ಮುಂತಾದವರು ನಟಿಸಿದ್ದಾರೆ. ವಜ್ರಮುನಿ ಅವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸಿದ್ದು, ಮಯೂರ್ ಪಟೇಲ್ ಖಳ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಧರ್ಮ ವಿಶ್ ಸಂಗೀತ, ಭದ್ರಾವತಿ ಹಾಲೇಶ್ ಅವರ ಛಾಯಾಗ್ರಹಣವಿದೆ.