ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಮಂಜು ಅಭಿನಯದ ‘ವಿಷ್ಣುಪ್ರಿಯ’ ಮುಗಿದು ಯಾವ ಕಾಲವಾಯ್ತೋ ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಪುನೀತ್ ರಾಜಕುಮಾರ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಕಾರಣಾಂತರಗಳಿಂದ ಚಿತ್ರ ಇನ್ನೂ ಬಿಡುಗಡೆ ಆಗಿಲ್ಲ.
ಈ ಮಧ್ಯೆ, ಶ್ರೇಯಸ್ ಮಂಜು ಕಳೆದ ಎರಡು ವಾರಗಳಿಂದ ಅಮೇರಿಕಾದಲ್ಲಿ ಬೀಡುಬಿಟ್ಟಿದ್ದಾರೆ. ಅಲ್ಲೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಬರಬಹುದು. ಶ್ರೇಯಸ್ ನಟನೆ ಮತ್ತು ಸಾಹಸದ ಬಗ್ಗೆ ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಈ ಕುರಿತು ಸಂದೇಶ ಕಳಿಸಿರುವ ಶ್ರೇಯಸ್, ‘ಎರಡು ವಾರಗಳಿಂದ ಅಮೇರಿಕಾದಲ್ಲಿದ್ದೇನೆ. ಹೊಸಹೊಸ ಜನರನ್ನು ಭೇಟಿ ಆಗುವುದರ ಜೊತೆಗೆ, ಮುಂದಿನ ವರ್ಷ ಪ್ರಾರಂಭವಾಗಲಿರುವ ಒಂದು ಅಂತಾರಾಷ್ಟ್ರೀಯ ಮಟ್ಟದ ಆ್ಯಕ್ಷನ್ ಸಿನಿಮಾದಲ್ಲಿ ನಟಿಸುವುದಕ್ಕೆ ಚರ್ಚೆ ನಡೆಯುತ್ತಿದೆ. ನ್ಯೂಯಾರ್ಕ್ ಮತ್ತು ಚಿಕಾಗೋ ನಗರದ ಹಲವು ಸಿನಿಮಾ ಶಾಲೆಗಳಲ್ಲಿ ನಟನೆಯ ಬಗ್ಗೆ ಮಾಸ್ಟರ್ ಕ್ಲಾಸ್‍ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಹಾಗೆಯೇ, ಪಾರ್ಕರ್ ಎಂಬ ಸಾಹಸ ಕಲೆಯನ್ನು ಕಲಿಯುತ್ತಿದ್ದೇನೆ. ಹೆಚ್ಚಿನ ವಿಷಯಗಳನ್ನು ನನ್ನ ಮುಂದಿನ ಚಿತ್ರ ಮುಗಿದ ತಕ್ಷಣ ಹಂಚಿಕೊಳ್ಳಲಿದ್ದೇನೆ’ ಎಂದು ಹೇಳಿದ್ದಾರೆ.
ಅಂದಹಾಗೆ, ‘ವಿಷ್ಣುಪ್ರಿಯ’ ಚಿತ್ರವಲ್ಲದೆ ಶ್ರೇಯಸ್ ಇನ್ನೂ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದ ಚಿತ್ರವದು. ಈ ಚಿತ್ರದಲ್ಲಿ ‘ದುನಿಯಾ’ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿ ಒಂದಿಷ್ಟು ಭಾಗದ ಚಿತ್ರೀಕರಣ ಸಹ ಆಗಿದೆ. ಅಮೇರಿಕಾದಿಂದ ಶ್ರೇಯಸ್ ವಾಪಸ್ಸು ಬಂದ ತಕ್ಷಣ ಚಿತ್ರೀಕರಣ ಮುಂದುವರೆಯುವ ಸಾಧ್ಯತೆ ಇದೆ.
ಅಂದಹಾಗೆ, ಈ ಎರಡೂ ಚಿತ್ರಗಳನ್ನು ಕೆ. ಮಂಜು ನಿರ್ಮಿಸುತ್ತಿದ್ದಾರೆ.