Mysore
23
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮಹಾನ್’ ಆದ ವಿಜಯ್‍ ರಾಘವೇಂದ್ರ, ಇದು ಅನ್ನದಾತನ ಕುರಿತಾದ ಕಥೆ

ಪಿ.ಸಿ. ಶೇಖರ್‍ ನಿರ್ದೇಶನದ ‘ಬ್ಯಾಡ್‍’ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಈ ಮಧ್ಯೆ, ಅವರ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಸದ್ದಿಲ್ಲದೆ ಆಗಿದೆ. ಶೇಖರ್‍ ಈ ಬಾರಿ ವಿಜಯ್‍ ರಾಘವೇಂದ್ರ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದಶನ ಮಾಡುತ್ತಿದ್ದು, ಈ ಚಿತ್ರಕ್ಕೆ ‘ಮಹಾನ್‍’ ಎಂದು ಹೆಸರಿಡಲಾಗಿದೆ. ಈ ಶೀರ್ಷಿಕೆಯನ್ನು ಶಿವರಾಜಕುಮಾರ್‍ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಮಹಾನ್‍’ ಚಿತ್ರವನ್ನು ಅಲೆಯನ್ಸ್ ಯೂನಿವರ್ಸಿಟಿ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ನಿರ್ಮಿಸುತ್ತಿದ್ದು, ಪಿ.ಸಿ.ಶೇಖರ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.

ಈ ಚಿತ್ರದಲ್ಲಿ ಮನರಂಜನೆ ಜೊತೆಗೆ ಸಂದೇಶವಿದೆ ಎನ್ನುವ ವಿಜಯ್‍ ರಾಘವೇಂದ್ರ, ‘ಈ ಚಿತ್ರದಲ್ಲಿ ಮನೋರಂಜನೆ ಇದೆ. ಮನೋರಂಜನೆಯ ಹಿಂದೆ ಒಂದು ಸಂದೇಶವಿದೆ. ನಿಜಕ್ಕೂ ಆ ಸಂದೇಶ ‘ಮಹಾನ್’ ಸಂದೇಶವಾಗಿರಲಿದೆ’ ಎನ್ನುತ್ತಾರೆ.

ಇದು ದೇಶಕ್ಕೆ ಅನ್ನ ನೀಡುವ ಅನ್ನದಾತನಾದ ರೈತನ ಕುರಿತಾದ ಕಥೆ ಎನ್ನುವ ಶೇಖರ್‍, ‘ಅದೇ ಕಾರಣಕ್ಕೆ ಚಿತ್ರಕ್ಕೆ ‘ಮಹಾನ್’ ಎಂದು ಹೆಸರಿಡಲಾಗಿದೆ. ‘ಮಹಾನ್’ ಎಂದರೆ ಪ್ರಮುಖ, ಶ್ರೇಷ್ಠ ಎಂಬ ಅರ್ಥಗಳು ಬರುತ್ತವೆ. ಅನ್ನ ನೀಡುವ ರೈತ ಎಲ್ಲರಿಗಿಂತ ದೊಡ್ಡವನು ಎಂದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ನಮ್ಮ ಚಿತ್ರಕ್ಕೆ ‘ಮಹಾನ್’ ಎಂದು ಹೆಸರಿಡಲಾಗಿದೆ. ಚಿತ್ರಕ್ಕೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಇನ್ನೂ ಪ್ರಮುಖ ಕಲಾವಿದರು ಅಭಿನಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ’ ತಿಳಿಸುತ್ತಾರೆ.

ಈ ಚಿತ್ರ ನಮ್ಮ ಪಾಲಿಗೆ ಕೇವಲ ಒಂದು ಸಿನೆಮಾ ಅಲ್ಲ, ಇದು ನಮ್ಮ ರೈತರಿಗೆ ಅರ್ಪಿಸುವ ಗೌರವ ಎನ್ನುವ ನಿರ್ಮಾಪಕ ಪ್ರಕಾಶ್‍, ‘ಈ ಪಾತ್ರಕ್ಕೆ ವಿಜಯ್‍ ರಾಘವೇಂದ್ರ ಅವರಿಗಿಂತ ಹೆಚ್ಚು ಸೂಕ್ತ ವ್ಯಕ್ತಿ ಯಾರೂ ಇಲ್ಲ. ಅವರ ಅಭಿನಯ, ಅವರ ಆತ್ಮೀಯತೆ ಈ ಪಾತ್ರಕ್ಕೆ ಜೀವ ತುಂಬಲಿದೆ’ ಎಂದು ಹೇಳಿದ್ದಾರೆ.

Tags:
error: Content is protected !!