Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪೋಸ್ಟರ್‌ನಿಂದ ಮಡೆನೂರು ಮನುನನ್ನು ಕೈಬಿಟ್ಟ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡ

kuladalli keelyavudo

ಕಳೆದ ವಾರ ಬಿಡುಗಡೆಯಾದ ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಎರಡನೇ ವಾರಕ್ಕೆ ಕಾಲಿಟ್ಟಿದೆ. ಮನು ಅವರಿಂದ ಸಾಕಷ್ಟು ಮುಜುಗರ ಅನುಭವಿಸಿರುವ ಚಿತ್ರತಂಡವು, ಇದೀಗ ಪೋಸ್ಟರ್‌ನಿಂದ ಅವರನ್ನು ಕೈಬಿಟ್ಟಿದೆ. ನಾಯಕನೇ ಇಲ್ಲದೆ ಚಿತ್ರತಂಡ ಪೋಸ್ಟರ್‌ ಬಿಡುಗಡೆ ಮಾಡಿದೆ.

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯ ಹಿಂದಿನ ದಿನ ನಾಯಕ ಮಡೆನೂರು ಮನು ಅವರನ್ನು ಪೊಲೀಸರು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿದ್ದರು. ಅದಾಗಿ ಎರಡು ದಿನಗಳ ನಂತರ ಶಿವರಾಜಕುಮಾರ್, ‍ಧ್ರುವ ಸರ್ಜಾ ಮತ್ತು ದರ್ಶನ್‍ ಕುರಿತು ಮನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸೋಷಿಯಲ್‍ ಮೀಡಿಯಾದಲ್ಲಿ ವೈರಲ್‍ ಆಯಿತು. ಮನು ವಿರುದ್ಧ ಪ್ರತಿಭಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಮನು ಅವರನ್ನು ಬ್ಯಾನ್‍ ಮಾಡಿತು. ಇದರಿಂದ ಸಾಕಷ್ಟು ಮುಜುಗರಕ್ಕೊಳಗಾದ ಚಿತ್ರತಂಡವರು ಮನು ಅವರಿಂದ ಅಂತರ ಕಾಯ್ದುಕೊಳ್ಳುವುದರ ಜೊತೆಗೆ, ಅವರನ್ನು ಪೋಸ್ಟರ್‍ನಿಂದಲೇ ಕೈಬಿಟ್ಟಿದೆ.

ಮನು ಮಾಡಿರುವ ತಪ್ಪಿಗೆ ನಮಗೆ ಶಿಕ್ಷೆ ಕೊಡಬೇಡಿ ಎಂದಿರುವ ನಿರ್ಮಾಪಕ ಸಂತೋಷ್‍ ಕುಮಾರ್, ‘ನಾವ್ಯಾರು ತಪ್ಪು ಮಾಡಿಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ. ನಾನು ಇಲ್ಲಿಗೆ ದುಡ್ಡು ಮಾಡಲು ಬಂದಿಲ್ಲ. ತುಂಬಾ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದಿದ್ದೇನೆ. ಇದು ಕನ್ನಡಿಗರಿಗಾಗಿ ಮಾಡಿದ ಸಿನಿಮಾ. ಚಿತ್ರಕ್ಕೆ ನೂರಾರು ಜನ ಕೆಲಸ ಮಾಡಿದ್ದೇವೆ. ನಾವೆಲ್ಲಾ ಏನು ತಪ್ಪು ಮಾಡಿದ್ದೇವೆ? ಮನು ಒಬ್ಬ ಒಳ್ಳೆಯ ಪ್ರತಿಭೆ ಎಂದು ಅವಕಾಶಕೊಟ್ಟೆವೇ ಹೊರತು, ಅವನು ನನ್ನ ಅಣ್ಣ ಅಥವಾ ತಮ್ಮನಲ್ಲ. ಈ ತರಹ ಮಾಡುತ್ತಾನೆ ಎಂದು ಗೊತ್ತಿರಲಿಲ್ಲ. ಕಾನೂನು ಪ್ರಕಾರ ಅವನಿಗೆ ಶಿಕ್ಷೆಯಾಗಲಿ. ಶಿವಣ‍್ಣ, ಧ್ರುವ ಮತ್ತು ದರ್ಶನ್‍ ಅವರಿಗೆ ಸಾರಿ ಕೇಳುತ್ತೇನೆ. ಅವರು ಸಹ ಕಷ್ಟದ ದಿನಗಳನ್ನು ನೋಡಿದ್ದಾರೆ. ನಿರ್ಮಾಪಕರು ಎಷ್ಟು ಕಷ್ಟಪಡುತ್ತಾರೆ ಎಂದು ಅವರಿಗೆ ಗೊತ್ತಿದೆ. ಚಿತ್ರ ನೋಡಿದವರು ಚೆನ್ನಾಗಿದೆ ಎನ್ನುತ್ತಿದ್ದಾರೆ. ಎಲ್ಲರೂ ಪಾಸಿಟಿವ್‍ ಆಗಿ ಮಾತನಾಡುತ್ತಿದ್ದಾರೆ. ಆದರೆ, ಮನು ಹೇಳಿಕೆ ಎಫೆಕ್ಟ್ ಆಗುತ್ತಿದೆ’ ಎಂದರು.

ನಿರ್ಮಾಪಕರಿಗೆ ಶಿವರಾಜಕುಮಾರ್‍ ಅಭಿಮಾನಿಗಳು ಫೋನ್‍ ಮಾಡಿದ್ದರಂತೆ. ಮನು ಕಟೌಟ್‍ ತೆಗೆಯಿರಿ ಎಂದು ಹೇಳಿದರಂತೆ. ‘ಶಿವಣ್ಣ ಅವರಿಗೆ ಅವಮಾನ ಎಂದು ಗೊತ್ತಾದಾಗ, ನಾವೇ ತೆಗೆಯುತ್ತಿದ್ದೆವು. ನಮಗೆ ಶಿವರಾಜ್‌ಕುಮಾರ್ ಅವರ ಕಡೆಯಿಂದ ಯಾವುದೇ ಸಮಸ್ಯೆ ಆಗಿಲ್ಲ. ಸಿನಿಮಾಗೆ ತೊಂದರೆ ಕೊಡಬೇಡಿ ಎಂದು ಶಿವಣ್ಣ ಹೇಳಿದ್ದಾರಂತೆ. ಹಾಗಾಗಿಯೇ, ಸಿನಿಮಾ ಈಗಲೂ ಓಡುತ್ತಿದೆ. ಆದರೆ, ಪ್ರೇಕ್ಷಕರು ಕಡಿಮೆಯಾಗಿದ್ದಾರೆ. ಅದಕ್ಕೆ ಕಾರಣ ಮನು ಆಡಿರುವ ಮಾತುಗಳು. ಅದನ್ನು ಕೇಳಿ ಎಲ್ಲರಿಗೂ ಬೇಸರವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ನಮ್ಮ ಬಗ್ಗೆ ದ್ವೇಷ ಬೇಡ. ದಯಮಾಡಿ ಬಂದು ಸಿನಿಮಾ ನೋಡಿ’ ಎಂದು ಮನವಿ ಸಲ್ಲಿಸುತ್ತಾರೆ.

Tags:
error: Content is protected !!