Mysore
16
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಯಶ್‍ಗೆ ಮಾಡಿದ ಕಥೆ ಈಗ ಪುನೀತ್‍ ಹೆಸರಲ್ಲಿ ಪ್ರಾರಂಭ

ಪುನೀತ್‍ ರಾಜಕುಮಾರ್‍ ನೆನಪಲ್ಲಿ ಸೆಟ್ಟೇರುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ‘ಅಪ್ಪು ಅಭಿಮಾನಿ’, ‘ಪುನೀತ್‍ ನಿವಾಸ’, ‘ಅಪ್ಪು ಟ್ಯಾಕ್ಸಿ’ ನಂತರ ಇದೀಗ ಇನ್ನೊಂದು ಚಿತ್ರ ಸದ್ದಿಲ್ಲದೆ ಸೋಮವಾರ ಪ್ರಾರಂಭವಾಗಿದೆ. ಅದೇ ‘ಪವರ್‍ ಸ್ಟಾರ್‍ ಧರೆಗೆ ದೊಡ್ಡವನು’. ಈ ಚಿತ್ರವನ್ನು ಸೂರ್ಯ ನಿರ್ದೇಶನ ಮಾಡುತ್ತಿದ್ದು, ಕಂಠೀರವ ಸ್ಟುಡಿಯೋದಲ್ಲಿ ಚಿತ್ರ ಸೆಟ್ಟೇರಿದೆ. ನಿರ್ದೇಶಕ ಶಶಾಂಕ್‍ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಸೂರ್ಯ ಇದುವರೆಗೂ ಸುಮಾರು 15 ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದಾರಂತೆ. ಈ ಹಿಂದೆ 2014ರಲ್ಲಿ ಯಶ್‍ ಅವರಿಗೆ ಒಂದು ಕಥೆ ಮಾಡಿಕೊಂಡಿದ್ದರಂತೆ. 50 ಲಕ್ಷ ಖರ್ಚು ಮಾಡಿ ಗ್ರಾಫಿಕ್ಸ್ ಮೂಲಕ ಟೀಸರ್ ಸಹ ಮಾಡಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಚಿತ್ರ ಆರಂಭಗೊಳ್ಳಲಿಲ್ಲ. ಆ ಕಥೆಯನ್ನು ಇಟ್ಟುಕೊಂಡು ಒಂದಷ್ಟು ಬದಲಾವಣೆ ಜೊತೆಗೆ ಈಗ ಚಿತ್ರ ಆರಂಭಿಸಿದ್ದಾರೆ.

ಈ ಚಿತ್ರದಲ್ಲಿ ವಿಶೇಷ ತಂತ್ರಜ್ಞಾನದ ಮೂಲಕ ಪುನೀತ್ ರಾಜಕುಮಾರ್ ಅವರನ್ನು ಪರದೆಯ ಮೇಲೆ ಸೃಷ್ಟಿ ಮಾಡಲಾಗುವುದಂತೆ. ಕಣ್ಣಿಲ್ಲದ ಮಗುವಿಗೆ ದೃಷ್ಟಿ ಬಂದಾಗ ಆಕೆಯ ಆಸೆ ನೆರವೇರಿಸಿಕೊಳ್ಳಲು ಏನೆಲ್ಲಾ ಮಾಡುತ್ತಾಳೆ ಎಂಬುದು ಚಿತ್ರದ ಕಥೆ.

’ಪವರ್ ಸ್ಟಾರ್ ಧರೆಗೆ ದೊಡ್ಡವನು’ ಚಿತ್ರದ ಕುರಿತು ಮಾತನಾಡುವ ಸೂರ್ಯ, ‘ಈಗಾಗಲೇ ಈ ಚಿತ್ರದ ಗ್ರಾಫಿಕ್ಸ್ ತಂತ್ರಜ್ಞಾನದ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಮಾತಿನ ಭಾಗ ಹಾಗೂ ಹಾಡಿನ ಭಾಗ ಚಿತ್ರೀಕರಣ ಮಾಡಬೇಕಿದೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು, ನಮ್ಮ ಚಿತ್ರವನ್ನು ಇದೇ ವರ್ಷ ಅಕ್ಟೋಬರ್‍ 29ರಂದು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.

‘ಸರಿಗಮಪ’ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿರುವ ಬೇಬಿ ಜ್ಞಾನ ಗುರುರಾಜ್ ಈ ಚಿತ್ರದಲ್ಲಿ ಪುನೀತ್‍ ಅಭಿಮಾನಿಯ ಪಾತ್ರ ಮಾಡುತ್ತಿದ್ದಾರಂತೆ. ಹಿರಿಯ ನಟ ಸುಚೇಂದ್ರ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ವಿಜಯ್ ಭಾಸ್ಕರ್ ಛಾಯಾಗ್ರಾಹಣ, ಅನುಶ್ರೀ ಶ್ರೀಧರ್ ಮೂರ್ತಿ ಸಂಗೀತವಿದೆ.

ಈ ಚಿತ್ರದಲ್ಲಿ ಶಿಲ್ಪಿಯ ಪಾತ್ರವೊಂದಿದ್ದು, ಅಯೋಧ್ಯೆಯ ಬಾಲರಾಮನ ವಿಗ್ರಹ ಕೆತ್ತಿದಂತಹ ಮೈಸೂರಿನ ಶಿಲ್ಪಿ ಯೋಗಿರಾಜ್ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಯುತ್ತಿದೆಯಂತೆ.

Tags:
error: Content is protected !!