‘ಕಾಟೇರ’ ಚಿತ್ರದದ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮಾಂತೆರೋ ಪರಸ್ಪರ ಪ್ರೀತಿಸಿ ಮದುವೆಯಾಗುತ್ತಿರುವ ಸುದ್ದಿ ಗೊತ್ತೇ ಇದೆ. ಆದರೆ, ಅವರಿಬ್ಬರ ಮದುವೆ ಯಾವಾಗ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಈಗ ಮದುವೆ ದಿನಾಂಕ ಹೊರಬಿದ್ದಿದ್ದು, ಆಗಸ್ಟ್ 10 ಮತ್ತು 11ರಂದು ತರುಣ್ ಮತ್ತು ಸೋನಲ್ ಮದುವೆ ಆಗಲಿದೆ ಎಂದು ಹೇಳಲಾಗುತ್ತಿದೆ.
‘ಕಾಟೇರ’ ಚಿತ್ರದ ಸಂದರ್ಭದಲ್ಲೇ ತರುಣ್ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿಬಂದಿತ್ತು. ಈ ಬಗ್ಗೆ ತರುಣ್ ನಾಚಿನೀರಾಗಿದ್ದರೂ, ಆದಷ್ಟು ಬೇಗ ಎಂದು ದರ್ಶನ್ ಹೇಳಿದ್ದರು. ಆದರೆ, ಹುಡುಗಿ ಯಾರು ಎಂಬ ವಿಷಯ ಗೊತ್ತಾಗಿರಲಿಲ್ಲ. ಆ ನಂತರ ತರುಣ್ ಮತ್ತು ಸೋನಲ್ ಪರಸ್ಫರ ಪ್ರೀತಿಸಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಬಂತು. ಇದಕ್ಕೆ ತಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ತರುಣ್ ತಾಯಿ ಮಾಲತಿ ಸಹ ಹೇಳಿದ್ದರು.
ಈ ನಡುವೆ ಅವರಿಬ್ಬರ ಮದುವೆ ಆಗಸ್ಟ್ 10 ಮತ್ತು 11ಕ್ಕೆ ನಿಗದಿಯಾಗಿದೆ. ಆದರೆ, ಸದ್ಯ ದರ್ಶನ್ ಜೈಲಿನಲ್ಲಿರುವುದರಿಂದ, ಅವರ ಅನುಪಸ್ಥಿತಿಯಲ್ಲಿ ಮದುವೆಯನ್ನು ಮುಂದಕ್ಕೆ ಹಾಕಲು ತರುಣ್ ತೀರ್ಮಾನಿಸಿದ್ದಂತೆ. ಆದರೆ, ದರ್ಶನ್ ಒತ್ತಾಯದ ಮೇರೆಗೆ ಮದುವೆಗೆ ಮುಂದಾಗಿದ್ದಾರೆ.
ದರ್ಶನ್ ಅವರಿಗೆ ತರುಣ್ ಮದುವೆ ಮೊದಲೇ ಗೊತ್ತಿತ್ತು. ಆದರೆ, ಈ ಬಗ್ಗೆ ಎಲ್ಲೂ ಮಾತಾಡಿರಲಿಲ್ಲ. ಇದೀಗ ಮದುವೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ತರುಣ್ ಇತ್ತೀಚೆಗೆ ಜೈಲಿಗೆ ಭೇಟಿ ಕೊಟ್ಟು ದರ್ಶನ್ ಅವರನ್ನು ಮಾತನಾಡಿಸಿ ಬಂದಿದ್ದಾರೆ. ಕೆಲವೇ ಜನರಿಗೆ ಅನುಮತಿ ಇದ್ದುದರಿಂದ ಸೋನಲ್ ಈ ಸಂದರ್ಭದಲ್ಲಿ ಹಾಜರಿರಲಿಲ್ಲ.
ಜೈಲಿನಲ್ಲಿ ದರ್ಶನ್ ಇರುವುದರಿಂದ ಮದುವೆ ಮುಂದೂಡುವ ಮಾತಾಡಿದರಂತೆ ತರುಣ್. ಈ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಮದುವೆ ಡೇಟ್ ಮುಂದೂಡಬಾರದು ಎಂದು ದರ್ಶನ್ ಹೇಳಿ ಕಳುಹಿಸಿದ್ದಾರಂತೆ ಮತ್ತು ಪತ್ನಿ ವಿಜಯಲಕ್ಷ್ಮೀ ಅವರಿಂದಲೂ ಈ ಮಾತು ಹೇಳಿಸಿದ್ದಾರಂತೆ. ದರ್ಶನ್ ಇಚ್ಛೆಯಂತೆ ಆಗಸ್ಟ್ 10,11ರಂದು ತರುಣ್ ಮದುವೆ ಜರುಗಲಿದೆ.
ಮದುವೆ ದಿನಾಂಕವೇನೋ ನಿಗದಿಯಾಗಿದೆ. ಆದರೆ, ಎಲ್ಲಿ ಮುಂತಾದ ವಿಷಯಗಳೆಲ್ಲಾ ಇನ್ನಷ್ಟೇ ಬಹಿರಂಗವಾಗಬೇಕಿದೆ.





