ತಮಿಳು ಚಿತ್ರರಂಗದ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ‘ಕಾಖ ಕಾಖ’ ಸಿನಿಮಾದಲ್ಲಿ ನಟ ಸೂರ್ಯರೊಂದಿಗೆ ತೆರೆ ಹಂಚಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಅಗಲಿಕೆಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.
ಡ್ಯಾನಿಯಲ್ ಬಾಲಾಜಿ ಅವರು ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಮಿಳು ಚಿತ್ರರಂಗ ಮಾತ್ರವಲ್ಲದೇ ಮಲಯಾಳಂ ಚಿತ್ರರಂಗದಲ್ಲಿಯೂ ಗಮನ ಸೆಳೆದಿದ್ದರು. ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ಬಿಗಿಲ್, ಭೈರವ ಚಿತ್ರಗಳಲ್ಲಿ ವಿಲನ್ ಆಗಿ ಎಲ್ಲರ ಮನೆ ಮಾತನಾಗಿದ್ದರು.
ಡ್ಯಾನಿಯಲ್ ಅವರು ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಇಂದು (ಮಾರ್ಚ್ 30) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.





