‘ದುನಿಯಾ’ ವಿಜಯ್ ಅಭಿನಯದ ‘ಸಲಗ’ ಚಿತ್ರದ ತಮ್ಮ ಸೂರಿ ಅಣ್ಣ ಪಾತ್ರದ ಮೂಲಕ ಜನಪ್ರಿಯರಾದ ದಿನೇಶ್, ಸದ್ದಿಲ್ಲದೆ ಒಂದು ಚಿತ್ರ ನಿರ್ಮಿಸಿ, ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ‘ಸೂರಿ ಅಣ್ಣ’ ಎಂದೇ ಹೆಸರಿಡಲಾಗಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್, ಲಹರಿ ವೇಲು, ಭೂಗತಲೋಕದಲ್ಲಿ ಒಂದು ಕಾಲದಲ್ಲಿ ಹೆಸರು ಮಾಡಿದ್ದ ಎಚ್.ಎಂ ಕೃಷ್ಣಮೂರ್ತಿ (ಜೇಡ್ರಳ್ಳಿ ಕೃಷ್ಣಪ್ಪ), ಪಿ.ಮೂರ್ತಿ, ಗಡ್ಡ ನಾಗಣ್ಣ, ಜೀಬ್ರಾ, ಲಕ್ಕಿ ಅಣ್ಣ, ಶ್ರೀರಾಮಪುರ ಮೊಟ್ಟೆ ಕಣ್ಣ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಾನು ಈ ಚಿತ್ರ ನಿರ್ಮಾಣ ಮಾಡಲು ಇಲ್ಲಿ ಬಂದಿರುವ ಸಾಕಷ್ಟು ಜನರು ಸ್ಪೂರ್ತಿ ಎಂದು ಮಾತು ಶುರು ಮಾಡಿದ ಸೂರಿ, ‘ಇದೊಂದು ರೌಡಿಸಂ ಚಿತ್ರ. ಯಾರೂ ರೌಡಿಸಂ ಮಾಡಬೇಡಿ, ಎಲ್ಲರಿಗೂ ಕುಟುಂಬ ಇರುತ್ತದೆ, ಎಲ್ಲದಕ್ಕಿಂತ ಅದು ಮುಖ್ಯ ಎಂಬ ಉತ್ತಮ ಸಂದೇಶವನ್ನು ಈ ಚಿತ್ರ ಯುವಜನತೆಗೆ ನೀಡುತ್ತದೆ. ನನ್ನ ಹೆಸರು ದಿನೇಶ್. ‘ಸಲಗ’ ಚಿತ್ರದ ನಂತರ ‘ಸೂರಿ ಅಣ್ಣ’ ಎಂದೇ ಎಲ್ಲರೂ ಗುರುತಿಸುತ್ತಾರೆ. ನಾನೇ ಈ ಚಿತ್ರವನ್ನು ನಿರ್ದೇಶಿಸಿ-ನಿರ್ಮಾಣ ಮಾಡಿದ್ದೇನೆ. ನಾನೇ ನಾಯಕನಾಗಿ ನಟಿಸಿದ್ದೇನೆ’ ಎಂದು ಮಾಹಿತಿ ನೀಡಿದರು.
ಹೆರಿಗೆ ನೋವಿನ ಬಗ್ಗೆ ತಾಯಿ ಮಾತ್ರ ಹೇಳಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದ ‘ಕಾಕ್ರೋಚ್’ ಸುಧಿ. ಹಾಗೆ ರೌಡಿಸಂ ಮಾಡಿದವರು ಅನುಭವಿಸಿದ ನೋವುಗಳನ್ನು ಅವರೆ ಹೇಳಬೇಕು. ಹಾಗೆ ಹೇಳುವುದರ ಜೊತೆಗೆ ಯಾರು ಕೂಡ ಈ ಕೆಲಸ ಮಾಡಬೇಡಿ ಎಂದು ಸಂದೇಶ ನೀಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಸೂರಿ ಮತ್ತು ಚಿತ್ರತಂಡದವರು ಮಾಡಿದ್ದಾರೆ’ ಎಂದರು.
‘ಸೂರಿ ಅಣ್ಣ’ ಚಿತ್ರದಲ್ಲಿ ಸಂಭ್ರಮ ಶ್ರೀ, ಕಾಕ್ರೋಚ್ ಸುಧಿ, ಯಶಸ್ವಿನಿ ಗೌಡ, ಕಾಮರಾಜ್, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಪ್ರಸಾದ್ ಮುಂತಾದವರು ನಟಿಸಿದ್ದು, ಕೆ.ಎಂ.ಇಂದ್ರ ಸಂಗೀತವಿದೆ. ಎಂ.ಬಿ.ಅಳಿಕಟ್ಟಿ ಛಾಯಾಗ್ರಹಣ, ಎನ್.ಎಂ. ವಿಶ್ವ ಸಂಕಲನವಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನೆರಡು ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ.





