Mysore
17
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

‘ಕೋರ’ನಾದ ಸುನಾಮಿ ಕಿಟ್ಟಿ; ಮೊದಲು ಕನ್ನಡದಲ್ಲಿ, ನಂತರ ತೆಲುಗು, ತಮಿಳಿನಲ್ಲಿ

ಹೀರೋ ಆಗಬೇಕೆಂಬ ಸುನಾಮಿ ಕಿಟ್ಟಿಯ ಕನಸು ಕೊನೆಗೂ ನಾಳೆ (ಏಪ್ರಿಲ್ 18) ನನಸಾಗುತ್ತಿದೆ. ಸುಮಾರು ಒಂದು ದಶಕದ ಹಿಂದೆಯೇ ಸುನಾಮಿ ಕಿಟ್ಟಿ ಹೀರೋ ಆಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಒಂದೆರಡು ಪ್ರಯತ್ನಗಳೂ ಆಗಿ, ಈಗ ‘ಕೋರ’ ಮೂಲಕ ಕಿಟ್ಟಿ ಹೀರೋ ಆಗುತ್ತಿದ್ದಾರೆ.

ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ, ‘ಒರಟ’ ಶ್ರೀ ನಿರ್ದೇಶನದ ‘ಕೋರ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ನೆರವೇರಿತು. ‘ಒರಟ’ ಪ್ರಶಾಂತ್, ‘ಬಿಗ್ ಬಾಸ್’ ಖ್ಯಾತಿಯ ತನಿಶಾ ಕುಪ್ಪಂಡ, ರಜತ್, ‘ಸಲಗ’ ಸೂರಿ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಮೊದಲು ಮಾತನಾಡಿದ ನಿರ್ಮಾಪಕ ಪಿ. ಮೂರ್ತಿ, ‘ಕೊರಗಜ್ಜನ ಆಶೀರ್ವಾದದಿಂದ, ನಮ್ಮ ತಾಯಿಯವರ ಹೆಸರಿನಲ್ಲಿ ರತ್ನಮ್ಮ ಮೂವೀಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ನಿರ್ದೇಶಕ ಶ್ರೀ ಹಾಗೂ ಇಡೀ ತಂಡದ ಶ್ರಮದಿಂದ ಈ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಫ್ಯಾಮಿಲಿ ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲರ್ ಹೀಗೆ ಹಲವು ಜಾನರ್ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ, ನಮ್ಮ ‘ಕೋರ’ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಇದು ಕಾಡಿನಲ್ಲೇ ನಡೆಯುವ ಕಥೆ. ನಾನು ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆ ಆಗಿ, ನಂತರದ ವಾರಗಳಲ್ಲಿ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆ ಆಗಲಿದೆ’ ಎಂದರು.

‘ಕೋರ’ ಸುಮಾರು 40 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯಂತೆ. ಕಾಡಿನಲ್ಲೇ ಹೆಚ್ಚು ನಡೆಯುವ ಕಥೆಯಂತೆ. ಕಾಡಿನ ಜನ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಕಥೆ. ಚಿತ್ರದಲ್ಲಿ ಸುನಾಮಿ ಕಿಟ್ಟಿ ಜೊತೆಗೆ ಚರಿಷ್ಮಾ, ಮುನಿ, ಸೌಜನ್ಯ, ಯತಿರಾಜ್‍, ‘ಕಾಕ್ರೋಚ್‍’ ಸುಧಿ, ಎಂ.ಕೆ.ಮಠ, ನೀನಾಸಂ ಅಶ್ವಥ್ ಮುಂತಾದವರು ನಟಿಸಿದ್ದಾರೆ. ನಿರ್ಮಾಪಕ ಮೂರ್ತಿ ಚಿತ್ರದಲ್ಲಿ ವಿಲನ್‍ ಆಗಿ ಕಾಣಿಸಿಕೊಂಡಿದ್ದಾರೆ.

 

ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದ ನಾನು ಈ ಚಿತ್ರದ ಮೂಲಕ ಹೀರೋ ಆಗಿದ್ದೇನೆ ಎಂದ ಕಿಟ್ಟಿ, ‘ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ ನಿರ್ಮಾಪಕ ಪಿ.ಮೂರ್ತಿ ಅವರಿಗೆ ಹಾಗೂ ನನಗೆ ಅಭಿನಯ ಹೇಳಿಕೊಟ್ಟು ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಸಿದ ನಿರ್ದೇಶಕ ಶ್ರೀ ಅವರಿಗೆ ಧನ್ಯವಾದ. ನಮ್ಮ ತಂಡದ ಶ್ರಮದಿಂದ ‘ಕೋರ’ ಒಂದೊಳ್ಳೆಯ ಚಿತ್ರವಾಗಿ ಬರುತ್ತಿದೆ’ ಎಂದರು.

‘ಕೋರ’ ಚಿತ್ರಕ್ಕೆ ಹೇಮಂತ್ ಕುಮಾರ್ ಸಂಗೀತ, ಸೆಲ್ವಂ ಛಾಯಾಗ್ರಹಣವಿದೆ.

Tags:
error: Content is protected !!