‘ಗೋವಿಂದ ಗೋವಿಂದ’ ನಂತರ ಸುಮಂತ್ ಶೈಲೇಂದ್ರ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಮೂರು ವರ್ಷಗಳ ನಂತರ ಸುಮಂತ್ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಅದೇ ‘ಚೇಸರ್’.
ಈ ತರಹದ ಯಾವ ಚಿತ್ರದಲ್ಲೂ ಸುಮಂತ್ ನಟಿಸುತ್ತಿರುವ ಸುದ್ದಿ ಇರಲಿಲ್ಲವಲ್ಲ ಎಂದು ಕೆಲವರಿಗೆ ಆಶ್ಚರ್ಯವಾಗಬಹುದು. ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಸುಮಂತ್ ಅಭಿನಯದ ಚಿತ್ರವು, ಇದೀಗ ‘ಚೇಸರ್’ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಧ್ರುವ ಸರ್ಜಾ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರವನ್ನು ಉಪೇಂದ್ರ ಅಭಿನಯದ ‘ಬುದ್ದಿವಂತ ೨’ ಚಿತ್ರದ ಖ್ಯಾತಿಯ ಎಂ. ಜಯ್ಯರಾಮಃ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ನನ್ನ ಸ್ನೇಹಿತನ ಪ್ರೇಮ ವಿವಾಹಕ್ಕೆ ಸಾಕ್ಷಿ ಹಾಕಲು ಸಬ್ ರಿಜಿಸ್ಟರ್ ಕಚೇರಿಗೆ ಹೋಗಿದಾಗ ಅಲ್ಲಿ ನನಗೆ ಅವರು ಹೇಳಿದ ಕಥೆಯೇ ಈಗ ‘ಚೇಸರ್’ ರೂಪದಲ್ಲಿ ಹೊರಬಂದಿದೆ. ಈ ಕಥೆಯನ್ನು ಮೆಚ್ಚಿ ಸಿನಿಮಾ ನಿರ್ಮಾಣ ಮಾಡಿದ ಮಾಲತಿ ಶೇಖರ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಬರಲು ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ’ ಎಂದರು.
ಸುಮಂತ್ ಶೈಲೇಂದ್ರ ಮಾತನಾಡಿ, ‘ಮೂರು ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ‘ಚೇಸರ್’ ಅಂದ ಕೂಡಲೇ ಬರೀ ಚೇಸಿಂಗ್ ಮಾತ್ರ ಇಲ್ಲ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ’ ಎಂದು ನಾಯಕ ಸುಮಂತ್ ಶೈಲೇಂದ್ರ ತಿಳಿಸಿದರು.
‘ಚೇಸರ್’ ಚಿತ್ರವನ್ನು ಮಾಲತಿ ಶೇಖರ್ ಶಿವಮೊಗ್ಗ ನಿರ್ಮಿಸುತ್ತಿದ್ದು, ಸುಮಂತ್ ಶೈಲೇಂದ್ರಗೆ ನಾಯಕಿಯಾಗಿ ರಕ್ಷ ಮೆನನ್ ನಟಿಸಿದ್ದಾರೆ. ಮಿಕ್ಕಂತೆ ರವಿಶಂಕರ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ‘ಕಡಿಪುಡಿ’ ಚಂದ್ರು ಮುಂತಾದವರು ನಟಿಸಿದ್ದಾರೆ. ‘ಚೇಸರ್’ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತವಿದೆ.




