ಕಳೆದ ವರ್ಷ ಕ್ರಿಸ್‌ಮಸ್ ಸಂದರ್ಭದಲ್ಲಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಿಡುಗಡೆಯಾಗಿತ್ತು. ಈ ವರ್ಷದ ಕ್ರಿಸ್‌ಮಸ್ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರ ಬಿಡುಗಡೆಯಾಗಲಿದೆ ಎಂದು ಸುದೀಪ್ ಮೊದಲೇ ಹೇಳಿದ್ದರು. ಆ ಮಾತನ್ನು ಸುದೀಪ್ ಉಳಿಸಿಕೊಂಡಿದ್ದಾರೆ. ಅದರ ಪ್ರಕಾರ, ಸುದೀಪ್ ಅವರ ಹೊಸ ಚಿತ್ರ ‘ಮಾರ್ಕ್’, ಡಿ.25ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಸುದೀಪ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮೊದಲು ನಿನ್ನೆ ಸೋಮವಾರ ಅವರ ಹೊಸ ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಅದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ಮಾರ್ಕ್’ ಚಿತ್ರದಲ್ಲಿ ಸುದೀಪ್, ಅಜಯ್ ಮಾರ್ಕಂಡೇಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನ ಅವರನ್ನು ಪ್ರೀತಿಯಿಂದ ‘ಮಾರ್ಕ್’ ಎಂದು ಕರೆಯುತ್ತಿರುತ್ತಾರೆ. ಹಾಗಾಗಿ, ಚಿತ್ರಕ್ಕೆ ‘ಮಾರ್ಕ್’ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಅವರ ಜೊತೆಗೆ ನಿಶ್ವಿಕಾ ನಾಯ್ಡು, ರೋಶನಿ ಪ್ರಕಾಶ್ ಮುಂತಾದವರು ಅಭಿನಯಿಸುತ್ತಿದ್ದು, ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ತಮಿಳಿನ ಸತ್ಯಜ್ಯೋತಿ ಕಂಬೈನ್ಸ್ ಸಂಸ್ಥೆಯು ನಿರ್ಮಾಣ ಮಾಡುತ್ತಿದೆ.
‘ಮಾರ್ಕ್’ ಚಿತ್ರವು ಡಿ.25ರಂದು ಕ್ರಿಸ್ಮಸ್ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಅದೇ ದಿನ ಶಿವರಾಜ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ.ಶೆಟ್ಟಿ ಅಭಿನಯದ ‘45’ ಚಿತ್ರ ಬಿಡುಗಡೆಯಾಗುತ್ತಿದೆ. ಎರಡೂ ಚಿತ್ರಗಳು ಒಂದೇ ದಿನ ಕ್ಲಾಶ್ ಆಗುತ್ತಿರುವ ಕುರಿತು ಮಾತನಾಡಿರುವ ಸುದೀಪ್, ‘ಅರ್ಜುನ್ ಜನ್ಯ ನಮ್ಮವರು. ಅದೂ ನಮ್ಮ ಚಿತ್ರವೇ. ಆದರೆ, ಈ ಚಿತ್ರ ಕ್ರಿಸ್‌ಮಸ್‌ಗೆ ಬಿಡುಗಡೆಯಾಗುತ್ತದೆ ಎಂದು ಜುಲೈ ಮೊದಲ ವಾರದಲ್ಲೇ ಹೇಳಿದ್ದೆ. ಈಗಾಗಲೇ ಶೇ. 60ರಷ್ಟು ಚಿತ್ರೀಕರಣ ಮುಗಿದಿದೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣ ಮುಗಿಯಲಿದೆ. ಕ್ರಿಸ್‌ಮಸ್‌ಗೆ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
‘ಬಿಲ್ಲ ರಂಗ ಭಾಷಾ’ ಚಿತ್ರದ ಕುರಿತು ಮಾತನಾಡುವ ಅವರು, ‘ಆ ಚಿತ್ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಅದು ಮುಂದಿನ ವರ್ಷ ಬಿಡುಡೆಯಾಗಲಿದೆ. ಆ ಚಿತ್ರಕ್ಕೆ ಸೆಟ್‍ಗಳು ನಿರ್ಮಾಣವಾಗಬೇಕಿರುವುದರಿಂದ, ಮಧ್ಯೆ ಗ್ಯಾಪ್ ಆಗುತ್ತದೆ. ‘ಮಾರ್ಕ್’ ಚಿತ್ರವನ್ನು ಒಮ್ಮೆಲೇ ಮುಗಿಸಿದರೆ, ಕೊನೆಯ ಪಕ್ಷ ಈ ವರ್ಷ ಒಂದು ಚಿತ್ರವಾದರೂ ಬಿಡುಗಡೆಯಾಗುತ್ತದೆ ಎಂಬ ಕಾರಣಕ್ಕೆ ಆ ಚಿತ್ರವನ್ನು ಸ್ವಲ್ಪ ಮುಂದೂಡಿದ್ದೇನೆ. ಆ ಚಿತ್ರ ನಿಂತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಸುಳ್ಳು. ಅದಿನ್ನೂ ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ ಎಂದರು.





