Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

Soon, sooner, soonest ಅಂದರೆ ಯಾವಾಗ? ಸುದೀಪ್‍ ಅಭಿಮಾನಿಗಳ ಪ್ರಶ್ನೆ

ಸುದೀಪ್‍ ಅಭಿನಯದ ಪ್ಯಾನ್‍ ಇಂಡಿಯಾ ಚಿತ್ರ ‘ಮ್ಯಾಕ್ಸ್’ನ ಟೀಸರ್ ಮಂಗಳವಾರ ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. ಈ ಮಧ್ಯೆ, ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಸುದೀಪ್‍ ಅಭಿಮಾನಿಗಳು ಕೇಳುತ್ತಿದ್ದಾರೆ.

‘ಮ್ಯಾಕ್ಸ್’ ಕಳೆದ ವರ್ಷವೇ ಪ್ರಾರಂಭವಾದ ಚಿತ್ರ. ಎಲ್ಲಾ ಅಂದುಕೊಂಡಂತೆ ಆದರೆ, ಕಳೆದ ವರ್ಷ ಡಿಸೆಂಬರ್‍ನಲ್ಲೇ ಚಿತ್ರೀಕರಣ ಮುಕ್ತಾಯವಾಗಲಿದೆ ಎಂದು ಸುದೀಪ್ ‍ಹೇಳಿಕೊಂಡಿದ್ದರು. ಆದರೆ, ಅದಾಗಿ ಏಳು ತಿಂಗಳಾದರೂ ಬಿಡುಗಡೆ ಆಗಿಲ್ಲ. ಇನ್ನು, ಚಿತ್ರದ ಬಗ್ಗೆ ಏನಾದರೂ ಮಾಹಿತಿ ಕೊಡಿ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಆದರೆ, ಚಿತ್ರತಂಡದವರಿಂದ ಯಾವುದೇ ಅಪ್‍ಡೇಟ್‍ ಇರಲಿಲ್ಲ.

ಹೀಗಿರುವಾಗಲೇ ಮಂಗಳವಾರ ಮಧ್ಯಾಹ್ನ, ‘ಮ್ಯಾಕ್ಸ್’ ಚಿತ್ರದ ಟೀಸರ್‍ ಬಿಡುಗಡೆ ಮಾಡುವ ಮೂಲಕ ಚಿತ್ರತಂಡದವರು ಸುದೀಪ್‍ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್‍ ಚಿತ್ರವಾಗಿದ್ದು, ಹಲವು ಸಾಹಸಮಯ ದೃಶ್ಯಗಳಿವೆ. ಇನ್ನು, ಟೀಸರ್‍ನ ಕೊನೆಯಲ್ಲಿ ಚಿತ್ರದ ಬಿಡುಗಡೆ Soon, Sooner, Soonest ಎಂದು ಹೇಳಲಾಗಿದೆ.

ಎಲ್ಲಾ ಸರಿ, Soon, Sooner, Soonest ಎಂದರೆ ಯಾವಾಗ? ಎಂಬ ಪ್ರಶ್ನೆ ಸುದೀಪ್‍ ಅಭಿಮಾನಿಗಳದ್ದು. ಕೆಲವು ದಿನಗಳ ಹಿಂದೆ ಆಗಸ್ಟ್ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸುದೀಪ್‍ ಹೇಳಿಕೊಂಡಿದ್ದರು. ಆದರೆ, ಜುಲೈ ತಿಂಗಳು ಅರ್ಧ ಮುಗಿದರೂ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಿಲ್ಲ. ಹಾಗಾಗಿ, ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಉತ್ತರ ಇಲ್ಲ.

‘ಮ್ಯಾಕ್ಸ್’ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಪಕ ಕಲೈಪುಲಿ ಎಸ್. ಧನು, ತಮ್ಮ ವಿ‌ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ವಿಜಯ್‍ ಕಾರ್ತಿಕೇಯ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್‍ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಶೇಖರ್‍ ಚಂದ್ರು ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags: