Mysore
18
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಪುಟ್ಟಣ್ಣನ ಕತ್ತೆ’ಯ ಜೊತೆಗೆ ಬಂದ ಸಿದ್ದು ಪೂರ್ಣಚಂದ್ರ

‘ದಾರಿ ಯಾವುದಯ್ಯ ವೈಕುಂಠಕೆ’, ‘ತಾರಿಣಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ದು ಪೂರ್ಣಚಂದ್ರ, ಈ ಚಿತ್ರಗಳ ನಂತರ ‘ಬ್ರಹ್ಮಕಮಲ’ ಮತ್ತು ‘ಈ ಪಾದ ಪುಣ್ಯ ಪಾದ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಸುದ್ದಿ ಬಂದಿತ್ತು. ಈ ಎರಡೂ ಚಿತ್ರಗಳ ಬಿಡುಗಡೆಗೂ ಮೊದಲೇ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರ ಶುರು ಮಾಡಿದ್ದು, ಈ ಚಿತ್ರದ ಅರ್ಧ ಚಿತ್ರೀಕರಣವಾಗಿದೆ.

ಸಿದ್ದು ನಿರ್ದೇಶಿಸುತ್ತಿರುವ ಹೊಸ ಚಿತ್ರದ ಹೆಸರು ‘ಪುಟ್ಟಣ್ಣನ ಕತ್ತೆ’. ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್‌ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಮುಂದಿನ ಪೋಸ್ಟರ್‌ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆಯಂತೆ.

ಈ ಚಿತ್ರದ ಕುರಿತು ಮಾತನಾಡುವ ಸಿದ್ದು ಪೂರ್ಣಚಂದ್ರ, ‘ಎಲ್ಲರೂ ನಾಯಿ ಮೇಲೆ ಚಿತ್ರ ಮಾಡಿದರೆ, ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಎಂದು ಐಡಿಯಾ ಬಂದಾಗ ಈ ಕಥೆ ಹೊಳೆಯಿತು. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ. ಮೊದಲಿಗೆ ಇದು ಸಾವಾಲಾಗಿತ್ತು. ಕ್ರಮೇಣ, ಕತ್ತೆಯ ಜೊತೆಗೆ ನಟರನ್ನು ಬಿಟ್ಟು ಅಭ್ಯಾಸ ಮಾಡಿಸಿದೆವು. ಅದರೊಂದಿಗೆ ಬಾಂಧವ್ಯ ಬೆಳೆಸಿಕೊಂಡ ನಂತರ ಚಿತ್ರೀಕರಣ ಮಾಡಲಾಯಿತು’ ಎಂದು ಹೇಳಿಕೊಂಡಿದ್ದಾರೆ.

ಕತ್ತೆಯ ಜೊತೆಗಿನ ಒಡನಾಟ ಹೊಸದಾದ್ದರಿಂದ, ಅದರ ಮನಸ್ಥಿತಿ ನೋಡಿಕೊಂಡು ಚಿತ್ರೀಕರಣ ಮಾಡಿದೆವು ಎನ್ನುವ ಸಿದ್ದು, ‘ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ದು ವಿಶೇಷ’ ಎಂದಿರುವ ಸಿದ್ದು ಪೂರ್ಣಚಂದ್ರ, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ತನ್ಮಯ್ ಎಸ್. ಗೌಡ ಬಂಡವಾಳ ಹೂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರು, ಬಾಬು, ರೋಹಿಣಿ, ಎನ್.ಟಿ.ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್‍ ಸಂಗೀತವಿದೆ.

Tags:
error: Content is protected !!