Mysore
19
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಈ ಸಿನಿಮಾದಲ್ಲಿ ಸಿಕ್ಕ ತೃಪ್ತಿ, ಇದುವರೆಗೂ ಸಿಕ್ಕಿಲ್ಲ ಎಂದ ಶ್ರುತಿ

shruti

ನಟಿ ಶ್ರುತಿ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹೆಚ್ಚಾಗಿ ಸೆಂಟಿಮೆಂಟ್‍ ಪಾತ್ರಗಳಲ್ಲೇ ನಟಿಸಿದ್ದ ಅವರು, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದ ನಂತರ ವಿಭಿನ್ನ ಪಾತ್ರಗಳು ಸಿಕ್ಕಿವೆಯಂತೆ. ಅದರಲ್ಲೂ ‘ಮಾದೇವ’ ಚಿತ್ರದಲ್ಲಿ ಸಿಕ್ಕ ತೃಪ್ತಿ ಯಾವ ಚಿತ್ರದಲ್ಲೂ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ವಿನೋದ್‍ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರವು ಜೂನ್‍.06ರರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಇತ್ತೀಚೆಗೆ, ಚಿತ್ರದ ಪ್ರೀ-ರಿಲೀಸ್‍ ಕಾರ್ಯಕ್ರಮ ನಡೆದಿದೆ. ಈ ಸಂದರ್ಭದಲ್ಲಿ ‘ಎದೇಲಿ ತಂಗಾಳಿ …’ ಎಂಬ ಹಾಡು ಬಿಡುಗಡೆಯಾಗಿದೆ. ಪ್ರಸನ್ನ ಕುಮಾರ್ ‍ಬರೆದಿರುವ ಹಾಡಿಗೆ, ಅನನ್ಯ ಭಟ್‍ ಧ್ವನಿಯಾಗಿದ್ದು, ಪ್ರದ್ಯೋತ್ತನ್‍ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡಿನಲ್ಲಿ ವಿನೋದ್‍ ಪ್ರಭಾಕರ್ ಮತ್ತು ಸೋನಲ್‍ ಕಾಣಿಸಿಕೊಂಡಿದ್ದಾರೆ

ಈ ಸಂದರ್ಭದಲ್ಲಿ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರುತಿ ಮಾತನಾಡಿದರು. ‘ನಾನು ಚಿತ್ರರಂಗಕ್ಕೆ ಬಂದು 35 ವರ್ಷಗಳಾಗಿವೆ. 130 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೂ ಆ ಸಿನಿಮಾಗಳಲ್ಲಿ ಸಿಕ್ಕ ತೃಪ್ತಿ, ಇದರಲ್ಲಿ ಜಾಸ್ತಿಯೇ ಸಿಕ್ಕಿದೆ. ಈ ತರಹದ ವಿಭಿನ್ನ ಪಾತ್ರಗಳನ್ನು ಮಾಡುವುದಕ್ಕೆ ನಿರ್ದೇಶಕರು ನನ್ನನ್ನು ಕಲ್ಪಿಸಿಕೊಳ್ಳುತ್ತಾರೆ ಎಂಬುದೇ ಸಂತೋಷ. ಕಲಾವಿದೆಯಾಗಿ ನಾನು ಗೆದ್ದೆ ಎಂದು ನನಗೆ ಅನಿಸುವುದೇ ಆಗ. ಏಕತಾನತೆಯ ಪಾತ್ರಗಳಿದ್ದರೆ ಕಲಿಕೆ ಸಾಧ್ಯವಿರುವುದಿಲ್ಲ. ನಾಯಕಿಯಾಗಿದ್ದಾಗ ಈ ತರಹದ ವಿಭಿನ್ನ ಪಾತ್ರ ಮಾಡುವುದಕ್ಕೆ ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆ. ಆ ಸವಾಲು ತೆಗೆದುಕೊಂಡೆ. ನಿರೀಕ್ಷೆಗೆ ತಕ್ಕಂತೆ ನಟಿಸಿದ್ದೀನಿ ಎಂದು ಅವರು ನಿರ್ದೇಶಕರು ಹೇಳಿದ್ದು ಕೇಳಿ ಖುಷಿಯಾಯಿತು’ ಎಂದರು.

ನಿರ್ದೇಶಕ ನವೀನ್‍ ರೆಡ್ಡಿ ಮಾತನಾಡಿ, ‘ಈ ಚಿತ್ರ ನೋಡಿ ಹೊರ ಬಂದ ಮೇಲೆ, ವಿನೋದ್‍ ಪ್ರಭಾಕರ್ ಜೊತೆಗೆ ಶ್ರುತಿ ಸಹ ಮನಸ್ಸಲ್ಲಿ ಉಳಿಯುತ್ತಾರೆ. ಅವರು ಪಾತ್ರ ಭಯ ಹುಟ್ಟಿಸುತ್ತದೆ. ಅವರು ಎಲ್ಲರಿಗೂ ಇಷ್ಟವಾಗುತ್ತಾರೆ ಎಂಬ ನಂಬಿಕೆ ಇದೆ. ನಮಗೆ ಒಳ್ಳೆಯ ಪಾತ್ರಧಾರಿಗಳು ಸಿಕ್ಕರು. ಅವರು ಅಭಿನಯಿಸುತ್ತಿದ್ದರೆ ಕರೆಕ್ಷನ್‍ ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಚಿತ್ರ ನೋಡಿ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ಈ ಕಾರ್ಯಕ್ರಮದಲ್ಲಿ ವಿನೋದ್‍ ಪ್ರಭಾಕರ್, ಸೋನಾಲ್ ಮಾಂತೇರೋ, ನಿರ್ಮಾಪಕ ಕೇಶವ, ಸೋನಾಲ್‍, ಸಂಗೀತ ನಿರ್ದೇಶಕ ಪ್ರದ್ಯೋತ್ತನ್‍ ಮುಂತಾದವರು ಹಾಜರಿದ್ದರು.

Tags:
error: Content is protected !!