ಕನ್ನಡದ ಮಹತ್ವದ ನಿರ್ದೇಶಕರ ಪೈಕಿ ಪಿ. ಶೇಷಾದ್ರಿ ಸಹ ಒಬ್ಬರು. ಮೂರು ದಶಕಗಳ ತಮ್ಮ ಚಿತ್ರಜೀವನದಲ್ಲಿ ೧೨ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಅವರು, ತಾವು ನಿರ್ದೇಶಿಸಿದ ಮೊದಲ ಎಂಟು ಸಿನಿಮಾಗಳಿಗೆ ಸತತವಾಗಿ ಎಂಟು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೆ ಹಲವು ಹೆಗ್ಗಳಿಕೆಗೆ ಪಾತ್ರರಾಗಿರುವ ಅವರ ಸಿನಿಮಾವಲೋಕನವನ್ನು ಸಮಾನ ಆಸಕ್ತರ ಬಳಗವು ಆಯೋಜಿಸಿದೆ.
ಈ ಸಿನಿಮಾವಲೋಕನವು ಇಂದು ಗುರುವಾರ ನವೆಂಬರ್ ೨೧ರಿಂದ ೨೪ರವರೆಗೂ ಪ್ರತಿ ಸಂಜೆ ನಾಲ್ಕರಿಂದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಡೆದಯಲಿದೆ. ಚಿತ್ರೋತ್ಸವ, ಸಿನಿಮಂಥನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಪ್ರಮುಖವಾಗಿ ದಿನಕ್ಕೆರಡರಂತೆ ಒಟ್ಟು ನಾಲ್ಕು ದಿನಗಳ ಕಾಲ ʼಮುನ್ನುಡಿʼ, ʼಬೆಟ್ಟದ ಜೀವʼ, ʼವಿಮುಕ್ತಿʼ, ʼಭಾರತ್ ಸ್ಟೋರ್ಸ್ʼ, ʼಮೋಹನದಾಸʼ, ʼಮೂಕಜ್ಜಿಯ ಕನಸುಗಳುʼ, ʼಡಿಸೆಂಬರ್ ೧ʼ ಮತ್ತು ʼಭೇಟಿʼ ಚಿತ್ರಗಳು ಪ್ರದರ್ಶನವಾಗಲಿವೆ. ಈ ಚಿತ್ರಗಳ ಕುರಿತು ಸಂವಾದಗಳನ್ನು ಸಹ ಅಯೋಜಿಸಲಾಗಿದೆ. ಈ ಸಂವಾದಗಳಲ್ಲಿ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ.
ಕೊನೆಯ ದಿನ ಅಂದರೆ, ಭಾನುವಾರ (ನವೆಂಬರ್ ೨೪) ಸಂಜೆ ಪಿ. ಶೇಷಾದ್ರಿಯವರ ಸಿನಿಮಾವಲೋಕನ ಕುರಿತು ನಾಲ್ಕು ಪುಸ್ತಕಗಲ ಲೋಕಾರ್ಪಣೆ ನಡೆಯಲಿದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಸಿಗಳಾದ ಶಾಲಿನಿ ರಜನೀಶ್ ಅವರು ʼಚಿತ್ರ-ಮಂಥನʼ, ʼಕಣ್ಣು ಕಂಡ ಕ್ಷಣಗಳುʼ, ʼದಕ್ಕಿದ್ದು-ಮಿಕ್ಕಿದ್ದುʼ ಮತ್ತು ʼFrames of Conscienceʼ ಎಂಬ ಗೋಪಾಲಕೃಷ್ಣ ಪೈ ಸಂಪಾದಿಸಿರುವ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಅಂದು ಡಾ. ಗಿರೀಶ್ ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ಟಿ.ಎಸ್. ನಾಗಾಭರಣ, ಬಸಂತ್ ಕುಮಾರ್ ಪಾಟೀಲ್, ಟಿ.ಎನ್. ಸೀತಾರಾಂ ಮುಂತಾದವರ ಸಮ್ಮುಖದಲ್ಲಿ ಪುಸ್ತಕಗಳು ಬಿಡುಗಡೆಯಾಗಲಿವೆ. ಜೊತೆಗೆ ಬಿ. ಜಯಶ್ರೀ, ಜಯಮಾಲ ರಾಮಚಂದ್ರ, ತಾರಾ, ಸುಧಾರಾಣಿ, ಭಾವನಾ, ನಿವೇದಿತಾ, ಲಕ್ಷೀ ಗೋಪಾಲಸ್ವಾಮಿ, ಸಿರಿ ರವಿಕುಮಾರ್, ನೀತೂ ಮುಂತಾದವರು ಭಾಗವಹಿಸಲಿದ್ದಾರೆ.
ಈ ಸಿನಿಮಾವಲೋಕನವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಕಾರದೊಂದಿಗೆ ಚಿತ್ರಸಮೂಹ, ಸುಚಿತ್ರಾ ಫಿಲಂ ಸೊಸೈಟಿ, ಅಂಕತ ಪುಸ್ತಕ ಮತ್ತು ಬುಕ್ಬ್ರಹ್ಮ ಸಹಯೋಗದೊಂದಿಗೆ ನಡೆಯಲಿದೆ.