ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ದಾಗುತ್ತಿದ್ದಂತೆಯೇ ಶೆಡ್ ಎಂಬ ಪದ ಸಖತ್ ವೈರಲ್ ಆಗಿಬಿಟ್ಟಿದೆ. ಇದೀಗ ‘ಶೆಡ್ಡಿಗೆ ಹೋಗೋಣ ಬಾ’ ಎಂಬ ಹಾಡು ಸಹ ಕನ್ನಡ ಚಿತ್ರದಲ್ಲಿ ತಯಾರಾಗುತ್ತಿದೆ. ಭರತ್ ಅಭಿನಯದ ‘ಮೆಜೆಸ್ಟಿಕ್ 2’ ಚಿತ್ರಕ್ಕೆ ಈ ಹಾಡು ಇತ್ತೀಚೆಗೆ ಚಿತ್ರೀಕರಣಗೊಂಡಿದೆ.
‘ಮೆಜೆಸ್ಟಿಕ್ 2’ ಚಿತ್ರದ ಐಟಂ ಸಾಂಗ್ ವೊಂದರ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ವರ್ಣರಂಜಿತ ಸೆಟ್‍ನಲ್ಲಿ ಇತ್ತೀಚೆಗೆ ನಡೆದಿದೆ. ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ’ ಎಂಬ ಈ ಹಾಡಿಗೆ ನಿರ್ದೇಶಕ ರಾಮು ಅವರೇ ಸಾಹಿತ್ಯ ಬರೆದಿದ್ದು, ಮೇಘನಾ ಹಳ್ಳಿಹಾಳ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ನಾಯಕ ಭರತ್ ಮತ್ತು ಹಲವು ಡ್ಯಾನ್ಸರ್‍ಗಳು ಕಾಣಿಸಿಕೊಂಡಿದ್ದು, ಸಂತೋಷ್ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಮೆಜೆಸ್ಟಿಕ್’ ಚಿತ್ರವು ದರ್ಶನ್‍ಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟ ಚಿತ್ರ. ಈಗ ಎರಡು ದಶಕಗಳ ನಂತರ ‘ಮೆಜೆಸ್ಟಿಕ್ 2’ ಚಿತ್ರ ತಯಾರಾಗುತ್ತಿದೆ. ಜನಪ್ರಿಯ ನಿರ್ಮಾಪಕ ಮತ್ತು ವಿತರಕ ಶಿಲ್ಪ ಶ್ರೀನಿವಾಸ್ ಅವರ ಮಗ ಭರತ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮೆಜೆಸ್ಟಿಕ್2’ ಚಿತ್ರದ ಮೂಲಕ, ಆ ಪ್ರದೇಶದಲ್ಲಿ ನಡೆಯುತ್ತಿರುವ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು, ರೌಡಿಸಂ ಮುಂತಾದ ವಿಷಯಗಳನ್ನು ಈ ಚಿತ್ರದಲ್ಲಿ ನಿರ್ದೇಶಕ ರಾಮು ಹೇಳುವುದಕ್ಕೆ ಹೊರಟಿದ್ದಾರೆ.
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಹನುಮಂತಪ್ಪ ಅವರು ನಿರ್ಮಿಸುತ್ತಿರುವ ‘ಮೆಜೆಸ್ಟಿಕ್’ ಚಿತ್ರಕ್ಕೆ ಶೇ.50ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಜೊತೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ.
‘ಮೆಜೆಸ್ಟಿಕ್ 2’ ಚಿತ್ರದಲ್ಲಿ ಭರತ್‍ಗೆ ನಾಯಕಿಯಾಗಿ ಸಂಹಿತಾ ವಿನ್ಯಾ ನಟಿಸಿದ್ದಾರೆ. ಹಿರಿಯ ನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನು ಮನಸು ಸಂಗೀತ ಮತ್ತು ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.