Mysore
27
mist

Social Media

ಬುಧವಾರ, 09 ಏಪ್ರಿಲ 2025
Light
Dark

ತಂದೆ-ಮಗನ ಸಂಘರ್ಷದ ‘ಬ್ರ್ಯಾಟ್‍’ ಜೊತೆಗೆ ಬಂದ ಶಶಾಂಕ್‍

ಶಶಾಂಕ್‍ ತಮ್ಮ ಪ್ರತೀ ಚಿತ್ರದಲ್ಲೂ ಬೇರೆ ಬೇರೆ ತರಹದ ಕಥೆಗಳನ್ನು ಹುಡುಕುತ್ತಾರೆ. ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ತಾಯಿ-ಮಗನ ಕಥೆ ಹೇಳಿದ್ದ ಶಶಾಂಕ್‍, ಇದೀಗ ಹೊಸ ಚಿತ್ರದಲ್ಲಿ ತಂದೆ-ಮಗನ ಸಂಘರ್ಷವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ‘ಬ್ರ್ಯಾಟ್‍’ ಎಂಬ ಹೆಸರನ್ನು ಇಟ್ಟಿದ್ದು, ಈ ಚಿತ್ರದ ಮೂಲಕ ತಂದೆ-ಮಗನ ಸಂ‍ಘರ್ಷವನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.

‘ಬ್ರ್ಯಾಟ್‍’ ಚಿತ್ರದ ಶೀರ್ಷಿಕೆಯ ಜೊತೆಗೆ ನಾಯಕನನ್ನು ಪರಿಚಯಿಸುವ ಮತ್ತು ಚಿತ್ರದ ಸಾರವನ್ನು ಹೇಳುವ ಒಂದು ಹಾಡನ್ನು ಇತ್ತೀಚೆಗೆ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ರಾಹುಲ್‍ DIT-O ಹಾಡುವುದರ ಜೊತೆಗೆ ಸಾಹಿತ್ಯವನ್ನೂ ರಚಿಸಿದ್ದಾರೆ.

‘ಬ್ರ್ಯಾಟ್‍’ ಕುರಿತು ಮಾತನಾಡುವ ಶಶಾಂಕ್‍, ‘ನಾನು ಸಹ ಈ ಜಾನರ್‍ನ ಚಿತ್ರವನ್ನು ಮಾಡಿರಲಿಲ್ಲ. ನನ್ನ ಪ್ರತಿ ಸಿನಿಮಾದಲ್ಲೂ ಏನಾದರೂ ವಿಶೇಷವಾಗಿರಬೇಕು ಎಂದು ಪ್ರಯತ್ನ ಪಡುತ್ತೇನೆ. ಬೇರೆ ಬೇರೆ ಜಾನರ್‍ ಚಿತ್ರಗಳನ್ನು ಪ್ರಯತ್ನಿಸುತ್ತೇನೆ. ಒಂದೇ ತರಹ ಇದೆ ಎಂದೆನಿಸಬಾರದು. ಹಾಗಾಗಿ, ಬೇರೆ ತರಹದ ಪ್ರಯತ್ನಗಳನ್ನು ಮಾಡುತ್ತಿರುತ್ತೇನೆ. ಇದು ಕೃಷ್ಣ ಅವರ ವೃತ್ತಿ ಜೀವನದಲ್ಲಿ ಇದುವರೆಗೂ ಮಾಡದಿರುವಂತಹ ಒಂದು ಚಿತ್ರ’ ಎಂದರು.

ಇದೊಂದು ಆ್ಯಕ್ಷನ್‍ ಥ್ರಿಲ್ಲರ್‍ ಚಿತ್ರ ಎನ್ನುವ ಅವರು, ‘ಇವತ್ತಿನ ತಲೆ ಮಾರಿನ ಯುವಕರ ಕಥೆ ಇದು. ಈ ಚಿತ್ರದಲ್ಲಿ ಅಚ್ಯುತ್‍ ಕುಮಾರ್‍, ಕೃಷ್ಣ ಅವರ ತಂದೆಯ ಪಾತ್ರ ಮಾಡಿದ್ದಾರೆ. ಇದು ತಂದೆ-ಮಗನ ಸಂಘರ್ಷ. ಈ ಸಂಘರ್ಷದಲ್ಲಿ ಹಲವು ವಿಷಯಗಳು ಬಂದು ಹೋಗುತ್ತವೆ. ಇಲ್ಲಿ ತಂದೆಯ ದೃಷ್ಟಿಯಲ್ಲಿ ಮಗ ‘ಬ್ರ್ಯಾಟ್‍’. ಈ ಕಥೆಗೆ ಈ ಶೀರ್ಷಿಕೆಯೇ ಸೂಕ್ತವಾಗಿತ್ತು. ಹಾಗಾಗಿ, ಈ ಶೀರ್ಷಿಕೆಯನ್ನೇ ಇಟ್ಟಿದ್ದೇವೆ’ ಎಂದರು.

‘ಡಾರ್ಲಿಂಗ್‍’ ಕೃಷ್ಣ ಮಾತನಾಡಿ, ‘ನನ್ನ ಪ್ರಕಾರ, ಕನ್ನಡದಲ್ಲಿ ತೀರ ಅಪರೂಪವಾದ ಕಥಾಹಂದರ ಹೊಂದಿರುವ ಚಿತ್ರವಿದು. ಪ್ರೇಮಕಥೆಗಳು, ಕೌಟುಂಬಿಕ ಕಥೆ ಇರುವ ಚಿತ್ರಗಳಲ್ಲಿ ನಾನು ನಟಿಸಿದ್ದೆ. ನನಗೆ ಇದು ಹೊಸ ತರಹದ ಚಿತ್ರ. ಈ ಚಿತ್ರಕ್ಕಾಗಿ ನಾನು ಮೊದಲ ಬಾರಿಗೆ ವರ್ಕ್ ಶಾಪ್ ಸಹ ಮಾಡಿದ್ದೇನೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ’ ಎಂದರು.

ಈ ಹಿಂದೆ ‘First Rank ರಾಜು’ ಚಿತ್ರವನ್ನು ನಿರ್ಮಿಸಿದ್ದ ಮಂಜುನಾಥ್‍ ಕುಂದಕೂರು ‘ಬ್ರ್ಯಾಟ್‍’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೃಷ್ಣ ಜೊತೆಗೆ ಮನೀಷಾ, ಅಚ್ಯುತ್‍ ಕುಮಾರ್‍, ರಮೇಶ್‍ ಇಂದಿರಾ, ಡ್ರ್ಯಾಗನ್‍ ಮಂಜು ಮುಂತಾದವರು ನಟಿಸುತ್ತಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಷ್‍ ಕಲ್ಲತ್ತಿ ಛಾಯಾಗ್ರಹಣವಿದೆ.

‘ಬ್ರ್ಯಾಟ್‍’, ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

Tags: