Mysore
22
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹಿರಿಯ ನಿರ್ದೇಶಕ ಮುರುಳಿ ಮೋಹನ್‌ ನಿಧನ

ಬೆಂಗಳೂರು : ಸ್ಯಾಂಡಲ್‌ವುಡ್‌ನ ಘಟಾನುಘಟಿ ನಟರಿಗೆ ಆಕ್ಷನ್‌ ಕಟ್‌ ಹೇಳಿದ್ದ ಹಿರಿಯ ನಿರ್ದೇಶಕ ಎಸ್.ಮುರಳಿ ಮೋಹನ್ ನಿಧನರಾಗಿದ್ದಾರೆ.

ಅವರಿಗೆ 57 ವರ್ಷ ವಯಸ್ಸಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಮುಂತಾದ ಘಟಾನುಘಟಿ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಅವರು ಬುಧವಾರ ಬೆಂಗಳೂರಿನ ಜೆಸಿ ರೋಡ್ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

36 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕೆಲವು ಸಮಯಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಿಡ್ನಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಐದಾರು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿಂದೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಅನುದಾನದ ಅವಶ್ಯಕತೆಯಿದೆ ಎಂದು ಅವರು ಹೇಳಿಕೊಂಡಿದ್ದರು. ಈ ಶಸ್ತ್ರಚಿಕಿತ್ಸೆಗೆ 30-35 ಲಕ್ಷ ರೂ. ಬೇಕಾಗಿತ್ತು. ಸುದೀಪ್, ಉಪೇಂದ್ರ ಧನಸಹಾಯ ಮಾಡಿದ್ದರು. ಆದರೆ, ಇದೀಗ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಉಪೇಂದ್ರ ಜತೆಗೆ ʼಶ್ʼ, ʼಓಂʼ ಚಿತ್ರಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಮುರಳಿ ಮೋಹನ್ ಬಳಿಕ ಉಪೇಂದ್ರ ನಟನೆಯ ʼನಾಗರಹಾವುʼ, ಶಿವ ರಾಜ್​ಕುಮಾರ್ ನಟನೆಯ ʼಸಂತʼ, ರವಿಚಂದ್ರನ್‌ ಅಭಿನಯದ ʼಮಲ್ಲಿಕಾರ್ಜುನʼ ಮುಂತಾದ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದರು.

ಬಹುಮುಖ ಪ್ರತಿಭೆ ಹೊಂದಿದ್ದ ಮುರಳಿ ಮೋಹನ್ ನಿರ್ದೇಶಕ ಮಾತ್ರವಲ್ಲದೆ ನಟ ಹಾಗೂ ಸಂಭಾಷಣೆಕಾರರೂ ಆಗಿದ್ದರು. ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿ, ನಟಿಸಿ, ಸಂಭಾಷಣೆ ಬರೆದಿದ್ದರು. ಅವರು ‘ರಾಜ್’ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಜತೆಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಈ ಹಿಂದೆ ಸಂದರ್ಶನವೊಂದರಲ್ಲಿ ಅವರು, ನನ್ನ ಆರೋಗ್ಯ ಸರಿಯಾಗಿಲ್ಲ. ಈ ಮೊದಲು ಡಯಾಲಿಸ್‌ ಮಾಡಿಸಿಕೊಳ್ಳುತ್ತಿದ್ದೆ. ಆದರೆ ಈಗ ಅದು ಟ್ರಾನ್ಸ್‌ಪ್ಲಾಂಟೇಶನ್ ಹಂತಕ್ಕೆ ಬಂದಿದೆ. ಈಗ ತಿಂಗಳಿಗೆ 30 ಸಾವಿರ ರೂ. ಖರ್ಚಾಗುತ್ತಿದೆ. ಹೊಸ ಕಿಡ್ನಿ ಹಾಕಿಸಿಕೊಳ್ಳಲು 30-35 ಲಕ್ಷ ರೂ. ಬೇಕು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದೀಗ ಪ್ರತಿಭಾವಂತ ನಿರ್ದೇಶಕನ್ನು ಸ್ಯಾಂಡಲ್‌ವುಡ್‌ ಕಳೆದುಕೊಂಡಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:
error: Content is protected !!