ಸಪ್ತಮಿ ಗೌಡ ಅಭಿನಯದ ‘ಯುವ’ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಸಪ್ತಮಿ ಅಭಿನಯದ ಯಾವೊಂದು ಚಿತ್ರವೂ ಬಿಡುಗಡೆ ಆಗಿರಲಿಲ್ಲ. ಆ ಸಂದರ್ಭದಲ್ಲೇ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವುದಾಗಿ ಸಪ್ತಮಿ ಗೌಡ ಹೇಳಿಕೊಂಡಿದ್ದರು. ಆ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದೆ.
ಅಂದಹಾಗೆ, ಸಪ್ತಮಿ ಗೌಡ ಅಭಿನಯಿಸುತ್ತಿರುವ ತೆಲುಗು ಚಿತ್ರದ ಹೆಸರು ‘ತಮ್ಮುಡು’. ಈ ಚಿತ್ರದಲ್ಲಿ ನಿತಿನ್ ನಾಯಕನಾಗಿ ಕಾಣಿಸಿಕೊಂಡರೆ, ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ. ನಿತಿನ್ ಜೊತೆಗೆ ಸಪ್ತಮಿ, ಸ್ವಸ್ತಿಕಾ ವಿಜಯ್, ವರ್ಷ ಬೋಳಮ್ಮ ಮುಂತಾದವರು ನಟಿಸಿದ್ದು, ಈ ಚಿತ್ರದಲ್ಲಿ ರಾಣಿ ಎಂಬ ಪಾತ್ರದಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ‘ಮೂಡ್ ಆಫ್ ತಮ್ಮುಡು’ ಎಂಬ ಟೀಸರ್ ಬಿಡುಗಡೆಯಾಗಿದೆ.
ಸಪ್ತಮಿ ಗೌಡಗೆ ಈಗಾಗಲೇ ಹಿಂದಿ ಚಿತ್ರ ‘ದಿ ವ್ಯಾಕ್ಸಿನ್ ವಾರ್’ನಲ್ಲಿ ನಟಿಸಿ ಬಂದಿದ್ದಾರೆ. ಈಗ ಅವರು ತೆಲುಗು ಚಿತ್ರ ‘ತಮ್ಮುಡು’ವಿನಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಸಪ್ತಮಿ ಗೌಡ, ಕುದುರೆ ಸವಾರಿ ಕಲಿತಿದ್ದಾರಂತೆ.
ಕನ್ನಡದ ವಿಷಯಕ್ಕೆ ಬಂದರೆ, ಅಭಿಷೇಕ್ ಅಂಬರೀಶ್ ಅಭಿನಯದ ‘ಕಾಳಿ’ ಚಿತ್ರದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ, ಚಿತ್ರ ಕಾರಣಾಂತರಗಳಿಂದ ನಿಂತಿದೆ. ಇದಲ್ಲದೆ, ಸತೀಶ್ ನೀನಾಸಂ ಅಭಿನಯದ ‘ರೈಸ್ ಆಫ್ ಅಶೋಕ’ ಚಿತ್ರದಲ್ಲಿ ಸಪ್ತಮಿ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಇದಲ್ಲದೆ ಅವರು ‘ತಮ’ ಎಂಬ ಹಿಂದಿ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇದೆ.
ಇನ್ನು, ‘ಕಾಂತಾರ – ಅಧ್ಯಾಯ 1’ರಲ್ಲಿ ಸಪ್ತಮಿ ನಟಿಸುತ್ತಾರಾ? ಎಂಬ ಪ್ರಶ್ನೆ ಇದಕ್ಕೂ ಮೊದಲು ಕೇಳಿಬಂದಿತ್ತು. ಇದು ‘ಕಾಂತಾರ’ದ ಹಿಂದಿನ ಕಥೆಯಾದ್ದರಿಂದ ಇಲ್ಲಿ ಲೀಲಾ ಪಾತ್ರವೂ ಇರುವುದಿಲ್ಲ, ತಾನೂ ನಟಿಸುತ್ತಿಲ್ಲ ಎಂದು ಸಪ್ತಮಿ ಗೌಡ ಸ್ಪಷ್ಟಪಡಿಸಿದ್ದಾರೆ.





