Mysore
20
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

‘ಸಂಜು ವೆಡ್ಸ್ ಗೀತಾ 2’ಗಿದ್ದ ತಡೆಯಾಜ್ಞೆಗೆ ತೆರವು: ಜನವರಿ.17ಕ್ಕೆ ಚಿತ್ರ ಬಿಡುಗಡೆ

ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ.10ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ತೆಲುಗು ನಿರ್ಮಾಪಕರೊಬ್ಬರು ನಾಗಶೇಖರ್ ಮೇಲೆ ಕೇಸ್‍ ಹಾಕಿ, ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದರು. ಹಾಗಾಗಿ, ಚಿತ್ರ ಜನವರಿ.10ರಂದು ಬಿಡುಗಡೆ ಆಗಿರಲಿಲ್ಲ. ಈಗ ನ್ಯಾಯಾಲಯ ವಿಧಿಸಿದ್ದ ತಡೆಯಾಜ್ಞೆಗೆ ತೆರವು ಸಿಕ್ಕಿದೆ. ಚಿತ್ರದ ಬಿಡುಗಡೆಗಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಚಿತ್ರವು ಜನವರಿ.17ಕ್ಕೆ ಬಿಡುಗಡೆಯಾಗುತ್ತಿದೆ.

ಈ ಕುರಿತು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಿರ್ಮಾಪಕ ಛಲವಾದಿ ಕುಮಾರ್‍, ಕೆಲವು ವರ್ಷಗಳ‌ ಹಿಂದೆ ನಾಗಶೇಖರ್ ನಿರ್ದೇಶಿಸಿದ್ದ ತೆಲುಗು ‘ಗುರ್ತುಂದ ಸೀತಾಕಲಂ’ನ ನಿರ್ಮಾಪಕರು ಹೈದರಾಬಾದ್ ಸಿವಿಲ್ ಕೋರ್ಟ್ನಲ್ಲಿ ನಾಗಶೇಖರ್ ಮೇಲೆ ಕೇಸ್ ಹಾಕಿ ಈ ಚಿತ್ರವನ್ನು ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದರು. ಚಿತ್ರದ ಪೋಸ್ಟರ್ ನಲ್ಲಿ ನಾಗಶೇಖರ್ ಮೂವೀಸ್ ಅಂತ ಇದ್ದದ್ದೇ ಇದಕ್ಕೆಲ್ಲ ಕಾರಣ. ಬಿಡುಗಡೆಯ ಹಿಂದಿನ ದಿನವಷ್ಟೇ ಸ್ಟೇ ತಂದಿದ್ದರಿಂದ ಸಿನಿಮಾ ಬಿಡುಗಡೆಯಾಗಲಿಲ್ಲ. ತಕ್ಷಣ ಲಾಯರ್ ಜತೆ ಹೈದರಾಬಾದ್‍ಗೆ ಹೋಗಿ, ನ್ಯಾಯಾಲಯಕ್ಕೆ ಮನವಿ ಮಾಡಿಕೊಟ್ಟೆ’ ಎಂದರು.

ಈ ಚಿತ್ರಕ್ಕೆ ನಾನೊಬ್ಬನೇ ನಿರ್ಮಾಪಕ ಎನ್ನುವ ಕುಮಾರ್, ‘ನಾಗಶೇಖರ್ ನಮ್ಮ ಚಿತ್ರದ ನಿರ್ದೇಶಕ ಮಾತ್ರ. ಈ ಚಿತ್ರವನ್ನು ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿ ಚಿತ್ರ ನಿರ್ಮಿಸಲಾಗಿದೆ. ಆ ಸಂಸ್ಥೆಗೆ ನಾನು ಮತ್ತು ನನ್ನ ಮಗ ಮಾತ್ರ ಪಾಲುದಾರರು. ಬೇರೆ ಯಾರೂ ಇಲ್ಲ. ಇದನ್ನು ನ್ಯಾಯಾಲಯಕ್ಕೆ ತಿಳಿಸಿದ ನಂತರ, ತಡೆಯಾಜ್ಞೆ ತೆರವು ಮಾಡವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಈ ಕೇಸ್‍ ರದ್ದಾಗಲು ಸ್ವಲ್ಪ ಕಾಲಾವಕಾಶ ಬೇಕು, ಅಲ್ಲಿಯವರೆಗೆ ನಾಲ್ಕೂವರೆ ಕೋಟಿ ಜಾಮೀನು ನೀಡಬೇಕು ಎಂದು ಹೇಳಿದರು. ಕೊನೆಗೆ ಅದೇ ಮೊತ್ತದ ನಮ್ಮ ಪ್ರಾಪರ್ಟಿ ಪತ್ರಗಳನ್ನು ಜಾಮೀನು ನೀಡಿ ಪ್ರದರ್ಶನಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದೇನೆ. ಈಗ ತಡೆಯಾಜ್ಞೆ ತೆರವು ಆಗಿರುವುದರಿಂದ, ಜನವರಿ.17ರಂದು ‘ಸಂಜು ವೆಡ್ಸ್ ಗೀತಾ 2 ಬಿಡುಗಡೆಯಾಗಲಿದೆ’ ಎಂದರು.

ಸಾಲ ತೀರಿಸದೇ ಇದ್ದುದರಿಂದ ತಡೆಯಾಜ್ಞೆ ತಂದಿದ್ದಾರೆ ಎಂಬ ವಿಷಯ ಸುಳ್ಳು ಎಂದಿರುವ ಕುಮಾರ್, ‘ಕೆಲವು ಕಡೆ ನಾನು ಆರು ಕೋಟಿ ಸಾಲ ಮಾಡಿಕೊಂಡಿದ್ದೆ, ಅದನ್ನು ತೀರಿಸದೇ ಇದ್ದುದರಿಂದ ತಡೆಯಾಜ್ಞೆ ತಂದರು ಎಂಬ ಸುದ್ದಿ ಕೇಳಿಬರುತ್ತಿದೆ. ಇದು ಸುಳ್ಳು. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ನಾಲ್ಕೂವರೆ ಕೋಟಿ ರೂ.ಗಳನ್ನು ಜಾಮೀನಿ ನೀಡಿರುವಾಗ, ನಾನ್ಯಾಕೆ ಸಾಲ ಮಾಡಲಿ’ ಎಂದು ಅವರು ಪ್ರಶ್ನಿಸಿದರು.

ನಿರ್ದೇಶಕ ನಾಗಶೇಖರ್ ಮಾತನಾಡಿ, ‘‘ಸಂಜು ವೆಡ್ಸ್ ಗೀತಾ’ ಹೆಸರಲ್ಲಿ ಸಿನಿಮಾ ಮಾಡೋದು ಕಷ್ಟ. ಈ ಹಿಂದೆ ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಬೀದಿಬೀದಿಯಲ್ಲಿ ನಿಂತು ದುಡ್ಡು ಎತ್ತಿದ್ದೇನೆ. ಅಷ್ಟೆಲ್ಲಾ ಕಷ್ಟಪಟ್ಟ ನಂತರ, ಸಿಕ್ಕ ಯಶಸ್ಸನ್ನು ಮರೆಯೋದಕ್ಕೆ ಸಾಧ್ಯವಿಲ್ಲ. ಈ ಚಿತ್ರಕ್ಕೂ ಇದ್ದ ಹಲವು ಅಡೆತಡೆಗಳನ್ನು ಎದುರಿಸಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ಶ್ರೀನಗರ ಕಿಟ್ಟಿ ಮತ್ತು ಚಕ್ರವರ್ತಿ ಚಂದ್ರಚೂಡ್‍ ಸಹ ಇದ್ದರು.

Tags:
error: Content is protected !!