ಸಾಕಷ್ಟು ಸಂಕಷ್ಟಗಳ ಮಧ್ಯೆ ಜನವರಿ 17ರಂದು ಬಿಡುಗಡೆಯಾಗಿದ್ದ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆಯಾದರೂ, ತಾಂತ್ರಿಕ ಶ್ರೀಮಂತವಾಗಿದ್ದರೂ, ಕಥೆಯಲ್ಲಿ ಗಟ್ಟಿತನವಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬಂದಿತ್ತು. ಚಿತ್ರದ ಕಥೆ-ಚಿತ್ರಕಥೆ ಮತ್ತಷ್ಟು ಗಟ್ಟಿಯಾಗಿದ್ದರೆ, ಇನ್ನಷ್ಟು ಮನಕಲಕುವ ಅಂಶಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಮಾತು ಕೇಳಿಬಂದಿತ್ತು.
ಈ ವಿಷಯ ಚಿತ್ರತಂಡಕ್ಕೂ ಸ್ಪಷ್ಟವಾಗಿರುವ ಹಾಗಿದೆ. ಹಾಗಾಗಿ, ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿ, ಇನ್ನಷ್ಟು ವಿಷಯಗಳನ್ನು ಸೇರಿಸಿ, ಮತ್ತೊಮ್ಮೆ ಹೊಸದಾಗಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಜನವರಿ 20ರಿಂದಲೇ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರದರ್ಶನವನ್ನು ವಿತರಕರಿಗೆ ಹೇಳಿ ಎಲ್ಲಾ ಕೇಂದ್ರಗಳಲ್ಲಿ ಸ್ಥಗಿತಗೊಳಿಸಲಾಗಿದೆ.
ವಿಶೇಷವೆಂದರೆ, ಹೊಸದಾಗಿ 20 ನಿಮಿಷಗಳ ಹೃದಯಸ್ಪರ್ಶಿ ದೃಶ್ಯಗಳನ್ನು ಚಿತ್ರಕ್ಕೆ ಮರು ಜೋಡಿಸಲಾಗುತ್ತಿದೆ. ಈ ಹೊಸ ಅವತರಣಿಕೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತಿದ್ದು, ಮರುಬಿಡುಗಡೆಯ ದಿನಾಂಕವನ್ನು ಅತಿ ಶೀಘ್ರದಲ್ಲೇ ಪ್ರಕಟಿಸುವುದಾಗಿ ನಿರ್ಮಾಪಕ ಛಲವಾದಿ ಕುಮಾರ್ ಹಾಗೂ ನಿರ್ದೇಶಕ ನಾಗಶೇಖರ್ ತಿಳಿಸಿದ್ದಾರೆ.
ಈ ಹಿಂದೆ, ಡಾ. ರಾಜಕುಮಾರ್ ಅಭಿನಯದ ‘ಬಿಡುಗಡೆ’ ಚಿತ್ರದಲ್ಲಿ ನಿರಪರಾಧಿಗೆ ಗಲ್ಲು ಶಿಕ್ಷೆಯಾಗುವಂತೆ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಲಾಯಿತು. ಆದರೆ, ಪ್ರೇಕ್ಷಕರು ಈ ಅಂತ್ಯವನ್ನು ಒಪ್ಪದ ಕಾರಣ, ನಂತರ ನಾಯಕನನ್ನು ಬಂಧಮುಕ್ತಗೊಳಿಸುವಂತೆ ಚಿತ್ರೀಕರಣ ಮಾಡಿ, ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಯಿತು.
‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿದೆ.





