ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರದ ಕೊನೆಯಲ್ಲಿ, ಆ ಚಿತ್ರ ಇನ್ನಷ್ಟು ಮುಂದುವರೆಯುವುದು ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ, ಚಿತ್ರದ ಹೆಸರು ‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಎಂದು ಸಹ ತೋರಿಸಲಾಗಿತ್ತು. ಆದರೆ, ಆ ಚಿತ್ರ ಯಾವಾ ಪ್ರಾರಂಭ ಮಾಹಿತಿ ಇರಲಿಲ್ಲ. ಮೂಲಗಳ ಪ್ರಕಾರ, ಆಗಸ್ಟ್ ತಿಂಗಳಿನಿಮದ ‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
‘ಸಲಾರ್’ ಚಿತ್ರ ಪ್ರಾರಂಭವಾದಾಗ ಒಂದೇ ಚಿತ್ರವಾಗಿತ್ತು. ಆದರೆ, ಬೆಳೆಯುತ್ತಾ ಹೋದಂತೆಲ್ಲಾ ಎರಡು ಚಿತ್ರವಾಯಿತು. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಘೋಷಿಸಿದ್ದರು. ಮೊದಲ ಭಾಗಕ್ಕೆ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಎಂಬ ಹೆಸರನ್ನು ನೀಡಲಾಗಿತ್ತು. ಎರಡನೆಯ ಭಾಗದ ಹೆಸರೇನಿರಬಹುದು ಎಂಬ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಚಿತ್ರತಂಡ ಈ ಪ್ರಶ್ನೆಗೆ ಉತ್ತರಿಸಿದ್ದು, ಎರಡನೆಯ ಭಾಗಕ್ಕೆ ‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಎಂಬ ಹೆಸರನ್ನು ಇಡಲಾಗಿದೆ.
‘ಸಲಾರ್’ನ ಮುಂದುವರೆದ ಭಾಗವೇನೋ ಬರುತ್ತದೆ ಎನ್ನುವುದು ಸರಿ. ಆದರೆ, ಯಾವಾಗ? ಎಂಬ ಪ್ರಶ್ನೆ ಕೇಳಿಬಂದಿತ್ತು. ಏಕೆಂದರೆ, ‘ಕೆಜಿಎಫ್ 2’ ನಂತರ ‘ಕೆಜಿಎಫ್ 3’ ಎಂಬ ಇನ್ನೊಂದು ಚಿತ್ರವನ್ನು ಪ್ರಶಾಂತ್ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಜೊತೆಗೆ ಜ್ಯೂನಿಯರ್ ಎನ್.ಟಿ.ಆರ್ ಅಭಿನಯದ ‘ಡ್ರ್ಯಾಗನ್’ ಸಹ ನಿರ್ದೇಶಿಸಬೇಕಿದೆ. ಈ ಮೂರು ಚಿತ್ರಗಳ ಪೈಕಿ ಮೊದಲು ಯಾವುದು ಎಂಬ ಪ್ರಶ್ನೆ ಸಹಜವಾಗಿಯೇ ಇದೆ.
ಮೂಲಗಳ ಪ್ರಕಾರ, ಮೊದಲು ‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ ಪ್ರಶಾಂತ್. ಈಗಾಗಲೇ ಆ ಚಿತ್ರದ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಮಾಡಿಟ್ಟುಕೊಂಡಿದ್ದಾರಂತೆ. ಆಗಸ್ಟ್ನಿಂದ ಎಂಟು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣ ಮುಗಿಸಿ, ಆ ನಂತರ ‘ಡ್ರ್ಯಾಗನ್’ನತ್ತ ಹೋಗುತ್ತಾರೆ ಎಂಬ ಸುದ್ದಿ ಇದೆ. ಈಗಾಗಲೇ ಸದ್ದಿಲ್ಲದೆ ರಾಮೋಜಿ ಫಿಲಂಸ ಸಿಟಿಯಲ್ಲಿ ಸೆಟ್ ನಿರ್ಮಾಣ ಶುರುವಾಗಿದ್ದು, ಸದ್ಯದಲ್ಲೇ ‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದಂತೆ.
‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲಂಸ್‍ನಡಿ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ.





