2020ರಲ್ಲಿ ‘ಸೆಪ್ಟೆಂಬರ್ 10’ ಎಂಬ ಚಿತ್ರ ಮಾಡುತ್ತಿರುವುದಾಗಿ ಘೋಷಿಸಿದ್ದರು ಹಿರಿಯ ನಿರ್ದೇಶಕ ಸಾಯಿಪ್ರಕಾಶ್. ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂಬ ಸಂದೇಶ ಸಾರುವ ಈ ಚಿತ್ರದ ಚಿತ್ರೀಕರಣ ಮುಗಿದು ನಾಲ್ಕು ವರ್ಷಗಳಾದರೂ ಚಿತ್ರ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಚಿತ್ರವನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಡಾ.ಎಸ್.ರಾಜು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಹಿರಿಯ ನಟರಾದ ರಮೇಶ್ ಭಟ್, ಶಿವಕುಮಾರ್, ಶ್ರೀರಕ್ಷಾ, ಗಣೇಶ್ ರಾವ್ ಕೇಸರ್ಕರ್ ಸೇರದಿಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
‘ಸೆಪ್ಟೆಂಬರ್ 10’ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ. ಚಿತ್ರಕ್ಕೆ ‘ಸೆಪ್ಟೆಂಬರ್ 10’ ಎಂಬ ಹೆಸರಿಟ್ಟಿರುವಾಗ, ಚಿತ್ರದ ಕಥೆ ಏನಿರಬಹುದು ಎಂದು ಊಹಿಸುವುದು ಸುಲಭ. ಪ್ರತೀ ದಿನ ನೂರಾರು ಜನ ಕಾರಣಾಂತರಗಳಿಂದ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಅದು ತಪ್ಪು ಎಂದು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ಮಾಡಿದ್ದಾರೆ ಸಾಯಿಪ್ರಕಾಶ್.
ಈ ಚಿತ್ರದ ಕುರಿತು ಮಾತನಾಡುವ ಸಾಯಿಪ್ರಕಾಶ್, ‘ಇದು 105ನೇ ಚಿತ್ರ. ದುಃಖ, ನೋವಿನಿಂದ ಯಾರೂ ಹೊರತಲ್ಲ. ಹಾಗಂತ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಅದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಐದು ಕಥೆಗಳಿವೆ. ಬೇರೆ ಬೇರೆ ಸ್ತರದ ಜನ ಹೇಗೆ ನೋವುಂಡು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾರೆ ಮತ್ತು ಅದರಿಂದ ಹೇಗೆ ಪಾರಾಗುತ್ತಾರೆ ಎಂದು ಹೇಳುವ ಪ್ರಯತ್ನ ಮಾಡಿದ್ದೇನೆ. ಇದು ಎಲ್ಲರಿಗೂ ತಲುಪಬೇಕಾದ ಚಿತ್ರ’ ಎಂದರು.
ಈ ಚಿತ್ರ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಚಾರ ಮಾಡುವುದಾಗಿ ಹೇಳಿದ ಸಾಯಿಪ್ರಕಾಶ್, ‘ಸುಮಾರು 45 ದಿನಗಳ ಕಾಲ ಪ್ರಚಾರ ಮಾಡುವ ಯೋಚನೆ ಇದೆ. ಬೇರೆ ಊರುಗಳಿಗೆ ಹೋಗಿ ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ, ನಂತರ ಜುಲೈನಲ್ಲಿ ಬಿಡುಗಡೆ ಮಾಡುವುದಾಗಿ ಅಂದುಕೊಂಡಿದ್ದೇನೆ. ಡಾ. ರಾಜು ಈ ಚಿತ್ರದ ಬಿಡುಗಡೆಗೆ ಸಹಕರಿಸುವುದಾಗಿ ಹೇಳಿದ್ದರೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡರು ತಮ್ಮೆಲ್ಲಾ ಸದಸ್ಯರಿಗೆ ಚಿತ್ರ ನೋಡುವುದಕ್ಕೆ ಹೇಳುವುದಾಗಿ ಹೇಳಿದ್ದಾರೆ. ಈ ಚಿತ್ರವನ್ನು ಪ್ರಶಸ್ತಿಗೆ ಕಳಿಸಲಿಲ್ಲ. ಜನರೇ ಅವಾರ್ಡು, ರಿವಾರ್ಡು ಕೊಡುತ್ತಾರೆ ಎಂಬ ನಂಬಿಕೆ ಇದೆ’ ಎಂದರು. ‘ಸೆಪ್ಟೆಂಬರ್ 10’ ಚಿತ್ರದಲ್ಲಿ ಶಶಿಕುಮಾರ್, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಶ್ರೀರಕ್ಷಾ, ದಿಶಾ ಪೂವಯ್ಯ, ರವೀಂದ್ರನಾಥ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಸಂಗೀತ, ಜೆ.ಜಿ. ಕೃಷ್ಣ ಛಾಯಾಗ್ರಹಣವಿದೆ





