ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಸದ್ಯ ವಿಚಾರಣಾಧೀನ ಖೈದಿಯಾಗಿರುವ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ವರದಿಯಾಗಿತ್ತು.
ಕೈಯಲ್ಲಿ ಕಾಫಿ ಕಪ್ ಇಟ್ಟುಕೊಂಡಿರುವ ದರ್ಶನ್, ಇತರೆ ಮೂವರೊಂದಿಗೆ ಕುಳಿತುಕೊಂಡಿದ್ದರು. ಅವರ ಮತ್ತೊಂದು ಕೈಯಲ್ಲಿ ಸಿಗರೇಟ್ ಇರುವುದು ಕೂಡ ಫೋಟೋದಲ್ಲಿ ಕಾಣಿಸುತ್ತಿತ್ತು.
ಈ ಹಿನ್ನೆಲೆಯಲ್ಲಿ ಈ ಫೋಟೋ ನೋಡಿದ ಮೇಲೆ ಆಕ್ರೋಶಗೊಂಡ ಜನತೆ, ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.
ಈ ಬೆನ್ನಲ್ಲೇ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವರ ಜಿ.ಪರಮೇಶ್ವರ್ ಅವರು, ಪ್ರಕರಣಕ್ಕೆ ಸಂಬಂಧಿಸಿಂತೆ 7 ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿ ಫೋಟೋ ತೆಗೆದವರು ಯಾರು ಹಾಗೂ ಅದು ಯಾರ ಮೊಬೈಲ್ ಅಂತಾನೂ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.





