ರವಿಚಂದ್ರನ್ ತಮ್ಮದೇ ನಿರ್ದೇಶನದ ಚಿತ್ರದಲ್ಲಿ ಕಳೆದ ಒಂದು ವರ್ಷದಿಂದ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಅವರು ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ಅಭಿನಯದ ‘ಜ್ಯೂನಿಯರ್’ ಚಿತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರವು ಜುಲೈ.18ರಂದು ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಮೊದಲ ಹಾಡು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಆದಿತ್ಯ ಮ್ಯೂಸಿಕ್ ಚಾನೆಲ್‍ನಲ್ಲಿ ಬಿಡುಗಡೆ ಆಗಿದೆ.
ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಲೆಟ್ಸ್ ಲೀವ್ ದಿಸ್ ಮೂವೆಂಟ್ …’ ಹಾಡಿಗೆ ಕಿರೀಟಿ, ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಪವನ್ ಭಟ್ ಸಾಹಿತ್ಯ ಬರೆದಿದ್ದು, ನಕುಲ್ ಅಭಯಂಕರ್ ಧ್ವನಿಯಾಗಿದ್ದಾರೆ.
ಹಾಡು ಬಿಡುಗಡೆ ನಂತರ ಮಾತನಾಡಿದ ರವಿಚಂದ್ರನ್, ‘ನಿರ್ದೇಶಕ ರಾಧಾಕೃಷ್ಣ ಕಥೆ ಹೇಳೋದು ಕಿವಿಯಲ್ಲಿ ಪಿಸುಗುಟ್ಟಿದಂತೆ ಇರುತ್ತದೆ. ಆದರೆ, ಅವರು ಹೇಳುವ ಕಥೆ ಮನಸ್ಸು ಮುಟ್ಟುತ್ತದೆ. ಇದೊಂದು ಲಾಂಗ್ ಜರ್ನಿ. ಸಿನಿಮಾ ಶುರುವಾಗಿ ಮೂರು ವರ್ಷಗಳಾಗಿವೆ. ಚಿತ್ರದ ರಷಸ್ ನೋಡಿದಾಗ ಹ್ಯಾಪಿ ಜರ್ನಿ ಎಂದೆನಿಸಿತು. ಒಂದು ಸಿನಿಮಾ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಮುಖ್ಯವಲ್ಲ, ಎಷ್ಟು ಸಮಯ ಕೊಡಿಸುತ್ತದೆ ಎನ್ನುವುದು ಬಹಳ ಮುಖ್ಯ. ಈ ತರಹದ ಕಥೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಧೈರ್ಯ ಬೇಕು. ಇಡೀ ಸಿನಿಮಾದಲ್ಲಿ ಕಿರೀಟಿ ಕಾಣಿಸಿಕೊಳ್ಳಬಹುದಿತ್ತು. ಆದರೆ, ಎಲ್ಲರಿಗೂ ಅವಕಾಶವಿರುವ ಒಂದು ಚಿತ್ರವನ್ನು ಕಿರೀಟಿ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಮೆರೆಯೋದಕ್ಕಿಂತ ಸಿನಿಮಾ ನನ್ನನ್ನು ಮೆರೆಸಬೇಕು ಎಂದು ಚಿತ್ರ ಮಾಡಿದ್ದಾರೆ. ಇವತ್ತಿನ ಯುವಕರು ಈ ತರಹದ ಕಥೆ ಒಪ್ಪಿಕೊಳ್ಳೋದು ಬಹಳ ಅಪರೂಪ’ ಎಂದರು.
ಈ ಚಿತ್ರದಲ್ಲಿ ಅವರು ಕಿರೀಟಿ ತಂದೆಯಾಗಿ ಕಾಣಿಸಿಕೊಂಡಿದ್ದಾರಂತೆ. ‘ಇದೊಂದು ಫ್ಯಾಮಿಲಿ ಚಿತ್ರ. ಅಪ್ಪ-ಮಗನ ಬಾಂಧವ್ಯದ ಕುರಿತಾದ ಚಿತ್ರ. ಚಿತ್ರ ನೋಡಿ ಹೊರಬರುತ್ತಿದ್ದಂತೆ ಕಣ್ಣಲ್ಲಿ ನೀರು ಬರುತ್ತದೆ. ಈ ಚಿತ್ರದಲ್ಲಿ ಜೆನಿಲಿಯಾ ಅವರದ್ದು ನನ್ನ ಮಗಳ ಪಾತ್ರ. ಇಲ್ಲಿ ನನಗೆ ಸುಧಾರಾಣಿ ಅವರನ್ನು ಕೊಟ್ಟಿದ್ದಾರೆ. ಆದರೆ, ಮಗ ಹುಟ್ಟಿದ ತಕ್ಷಣ ಕಳಿಸಿಕೊಟ್ಟುಬಿಡುತ್ತಾರೆ. ನಾಯಕಿ ಇದ್ದರೆ ಹಾಡು, ರೊಮ್ಯಾನ್ಸ್ ಕೊಡಬೇಕು. ಹುಡುಗಿ ಇದ್ದರೆ ರಿಸ್ಕು ಎಂದು ನಾಯಕಿಯನ್ನೇ ಕೊಟ್ಟಿಲ್ಲ’ ಎಂದು ತಮಾಷೆಯಾಗಿ ಹೇಳಿದರು. ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮಾತನಾಡಿ, `ಕಿರೀಟಿ ಒಳ್ಳೆ ಕಥೆ ಆಯ್ಕೆ ಮಾಡಿದ್ದಾರೆ. ಎಮೋಷನಲ್ ಕಥೆ ಚಿತ್ರದಲ್ಲಿದೆ. ಈ ಹಾಡಿಗೆ ಶ್ರೀಮಣಿ, ತೆಲುಗಿನಲ್ಲಿ ಸಾಹಿತ್ಯ ಬರೆದಿದ್ದಾರೆ. ಪವನ್ ಭಟ್ ಕನ್ನಡದಲ್ಲಿ ಹಾಡು ಬರೆದಿದ್ದಾರೆ. ಇಡೀ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ’ ಎಂದರು.
ನಟ ಕಿರೀಟಿ ಮಾತನಾಡಿ, ‘ಸಿನಿಮಾ ಮೂರು ವರ್ಷ ತಡವಾಗಿದೆ. ಅದಕ್ಕೆ ಕಾರಣ ಫೈಟ್ ಮಾಡುವಾಗ ನನಗೆ ಬೆನ್ನು ಇಂಜೂರಿ ಆಗಿತ್ತು. ಅದು ಹೊರತು ಬೇರೆ ಕಾರಣವಿಲ್ಲ. ರವಿ ಸರ್ ಜೊತೆ 25 ದಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದು ನನ್ನ ಪುಣ್ಯ. ಅವರಿಂದ ತುಂಬಾ ವಿಷಯಗಳನ್ನು ಕಲಿತೆ’ ಎಂದರು.
ರಾಧಾಕೃಷ್ಣ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಜ್ಯೂನಿಯರ್’ ಚಿತ್ರವನ್ನು ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಿರ್ಮಿಸಿದೆ. ‘ಬಾಹುಬಲಿ’ ಖ್ಯಾತಿಯ ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಚಿತ್ರದಲ್ಲಿ ರವಿಚಂದ್ರನ್, ಕಿರೀಟಿ, ಜೆನಿಲಿಯಾ, ಶ್ರೀಲೀಲಾ, ಸುಧಾರಾಣಿ ಮುಂತಾದವರಿದ್ದಾರೆ





