ಕಳೆದ ವರ್ಷ ಬಿಡುಗಡೆಯಾದ ‘ಶಾಖಾಹಾರಿ’ ಚಿತ್ರದಲ್ಲಿ ತಮ್ಮ ಪಾತ್ರದ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು ರಂಗಾಯಣ ರಘು. ಈಗ ಆ ತರಹದ ಇನ್ನೊಂದು ವಿಭಿನ್ನ ಮತ್ತು ಗಂಭೀರವಾದ ಪಾತ್ರದೊಂದಿಗೆ ಅವರು ವಾಪಸ್ಸಾಗುತ್ತಿದ್ದಾರೆ, ಅದು ‘ಅಜ್ಞಾತವಾಸಿ’ ಚಿತ್ರದ ಮೂಲಕ.
ಈ ‘ಅಜ್ಞಾತವಾಸಿ’ಯ ಒಂದು ವಿಶೇಷತೆಯೆಂದರೆ, ಈ ಚಿತ್ರವನ್ನು ಇಬ್ಬರು ನಿರ್ದೇಶಕರು ರೂಪಿಸಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ಎಂ.ರಾವ್ ಈ ಚಿತ್ರವನ್ನು ನಿರ್ಮಿಸಿದರೆ, ‘ಗುಳ್ಟು’ ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ಏಪ್ರಿಲ್.11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಂಗಾಯಣ ರಘು, ಶರತ್ ಲೋಹಿತಾಶ್ವ, ಪಾವನಾ ಗೌಡ, ಸಿದ್ದು ಮೂಲಿಮನಿ, ರವಿಶಂಕರ್ ಗೌಡ ಮುಂತಾದವರು ನಟಿಸಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮಲೆನಾಡಿನಲ್ಲಿ 90ರ ಕಾಲಘಟ್ಟದಲ್ಲಿ ನಡೆಯುವ ಒಂದಿಷ್ಟು ಕೊಲೆಗಳ ಸುತ್ತ ಈ ಚಿತ್ರ ಸಾಗುತ್ತದೆ.
ಈ ಚಿತ್ರದ ಕುರಿತು ಮಾತನಾಡುವ ರಂಗಾಯಣ ರಘು, ‘ಒಬ್ಬ ನಿರ್ದೇಶಕ ಇನ್ನೊಬ್ಬ ನಿರ್ದೇಶಕರ ಕಥೆ ಕೇಳಿ ಮೆಚ್ಚಿ ಸಿನಿಮಾ ನಿರ್ಮಿಸಿದ್ದು ವಿಶೇಷ. ಈ ಚಿತ್ರವನ್ನು ಹೇಮಂತ್ ನಿರ್ದೇಶಿಸಬಹುದಿತ್ತು. ಏಕೆಂದರೆ, ಅವರು ಈಗಾಗಲೇ ಸಾಕಷ್ಟು ಒಳ್ಳೆಯ ಚಿತ್ರಗಳನ್ನು ಮಾಡಿರುವವರು. ಆದರೆ, ಅವರು ಜನಾರ್ಧನ್ ಚಿಕ್ಕಣ್ಣಗೆ ಚಿತ್ರ ನಿರ್ದೇಶಿಸುವ ಅವಕಾಶ ಕೊಟ್ಟರು’ ಎಂದರು.
ಈ ಚಿತ್ರದಲ್ಲಿ ಎಲ್ಲಾ ಪಾತ್ರಗಳೂ ಹೊಟ್ಟೆಕಿಚ್ಚಾಗುವಂತೆ ಇವೆಯಂತೆ. ‘ಶರತ್ ಪಾತ್ರವಂತೂ ಡಬ್ಬಲ್ ಹೊಟ್ಟೆಕಿಚ್ಚಾಗುತ್ತದೆ. ಪಾವನಾ, ಸಿದ್ದು, ರವಿಶಂಕರ್ ಗೌಡ ಎಲ್ಲಾ ಪಾತ್ರಗಳೂ ಚೆನ್ನಾಗಿವೆ. ಈಗಾಗೇ ಕೊಲೆಗಳ ಬಗ್ಗೆ ಸಾಕಷ್ಟು ಒಳ್ಳೆಯ ಚಿತ್ರಗಳು ಬಂದಿವೆ. ಆ ಸಾಲಿಗೆ ಇದು ಸಹ ಸೇರುತ್ತದೆ ಎಂಬ ನಂಬಿಕೆ ಇದೆ’ ಎಂದರು.
ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆ ಇದು ಎನ್ನುವ ಜನಾರ್ಧನ್ ಚಿಕ್ಕಣ್ಣ, ‘ಮಲೆನಾಡಿನಲ್ಲಿ ನಡೆಯುವ ಕಥೆ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ದಾಖಲಾಗಿರುವುದಿಲ್ಲ. 1997ರಲ್ಲಿ ಮರ್ಡರ್ ಕೇಸ್ ದಾಖಲಾಗುತ್ತದೆ. ಅನುಭವ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್ ಹೇಗೆ ಬಗೆಹರಿಸುತ್ತಾರೆ ಎಂಬುವುದೇ ಕಥೆ’ ಎಂದರು.
‘ಅಜ್ಞಾತವಾಸಿ’ ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.





