ರಾಮ್ ಚರಣ್ ತೇಜ ಅಭಿನಯದ ‘ಪೆದ್ದಿ’ ಚಿತ್ರವು 2026ರ ಮಾರ್ಚ್.27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈ ಚಿತ್ರದ ಹಾಡೊಂದಕ್ಕೆ ಮೈಸೂರಿನಲ್ಲಿ ಚಿತ್ರೀಕರಣ ಸಾಗುತ್ತಿದೆ.
ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿದೆ. ರಾಮ್ ಚರಣ್ ತೇಜ ಜೊತೆಗೆ ಸಾವಿರಕ್ಕೂ ಹೆಚ್ಚು ನೃತ್ಯಗಾರರು ಹೆಜ್ಜೆ ಹಾಕುತ್ತಿದ್ದು, ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಈ ಹಾಡಿನ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.
ವಿಶೇಷವೆಂದರೆ, ಈ ಚಿತ್ರದಲ್ಲಿ ಶಿವರಾಜಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಒಂದು ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ. ಮೂಲಗಳ ಪ್ರಕಾರ, ಶಿವರಾಜಕುಮಾರ್ ಈ ಚಿತ್ರದಲ್ಲಿ ರಾಮ್ ಚರಣ್ ತೇಜ ಅವರ ಸಹೋದರನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇತ್ತೀಚೆಗೆ, ಶಿವರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವರಾಜಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಈ ಹಿಂದೆ ‘ಉಪ್ಪೆನ’ ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನ, ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಹಾಗೂ ರತ್ನವೇಲು ಛಾಯಾಗ್ರಹಣವಿದೆ.
‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್‍ಗೆ ಜೋಡಿಯಾಗಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಅಭಿನಯಿಸುತ್ತಿದ್ದು, ಜೊತೆಗೆ ಶಿವರಾಜಕುಮಾರ್, ಜಗಪತಿ ಬಾಬು, ದಿವ್ಯೆಂದು ಶರ್ಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
‘ಪೆದ್ದಿ’ ಚಿತ್ರವು ಮುಂದಿನ ವರ್ಷ ರಾಮ ನವಮಿಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.





