ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರವು ಮಹಾಶಿವರಾತ್ರಿ ಪ್ರಯುಕ್ತ ಫೆಬ್ರವರಿ 26ಕ್ಕೆ ಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ. ಇದುವರೆಗೂ ಚಿತ್ರತಂಡದವರು ಚಿತ್ರದ ನಾಯಕಿ ಯಾರು ಎಂಬ ವಿಷಯವನ್ನು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಘೋಷಣೆಯಾಗಿದ್ದು, ಸೋನಲ್ ಮೊಂಥೆರೋ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.
ನಿರ್ದೇಶಕ ಲೋಹಿತ್ ನಾಯಕಿ ಪ್ರಧಾನ ಚಿತ್ರಗಳನ್ನು ಹೆಚ್ಚು ನಿರ್ದೇಶಿಸಿದವರು. ಈ ಹಿಂದೆ ಅವರು ನಿರ್ದೇಶನ ಮಾಡಿರುವ ‘ಮಮ್ಮಿ – ಸೇವ್ ಮೀ’ ಮತ್ತು ‘ದೇವಕಿ’ ಚಿತ್ರಗಳಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ರಾಕ್ಷಸ’ ಚಿತ್ರವನ್ನು ಮಾಡಿ ಮುಗಿಸಿರುವ ಲೋಹಿತ್, ಚಿತ್ರದಲ್ಲೊಂದು ಪ್ರಮುಖ ಪಾತ್ರವನ್ನು ಸೋನಲ್‍ಗೆ ಕೊಟ್ಟಿದ್ದಾರೆ.
ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಫೆಬ್ರವರಿ 26ರಂದು ಬಿಡುಗಡೆಯಾಗುತ್ತಿರುವ ‘ರಾಕ್ಷಸ’ ಚಿತ್ರವು ಕನ್ನಡದ ಮೊಟ್ಟ ಮೊದಲ ಬಾರಿಗೆ ಟೈಮ್ ಲೂಪ್ ಹಾರರ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಹಾರರ್ ಮತ್ತು ಟೈಮ್ ಲೂಪ್ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಈಗ ಅವೆರಡೂ ಜಾನರ್‍ಗಳನ್ನು ಸೇರಿಸಿ, ‘ರಾಕ್ಷಸ’ ಮಾಡಿದ್ದಾರೆ ಲೋಹಿತ್.
‘ರಾಕ್ಷಸ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಸೋನಲ್ ಮೊಂಥೆರೋ ಜೊತೆಗೆ ಶೋಭರಾಜ್, ವತ್ಸಲಾ ಮೋಹನ್, ‘ಸಿದ್ಲಿಂಗು’ ಶ್ರೀಧರ್, ಆರ್ನ ರಾಥೋಡ್ ಮುಂತಾದವರು ನಟಿಸಿದ್ದು, ಜೇಬಿನ್ ಪಿ. ಜೋಕಬ್ ಛಾಯಾಗ್ರಹಣ ಮಾಡಿದ್ದಾರೆ. ವರುಣ್ ಉನ್ನಿ ಸಂಗೀತ ಮತ್ತು ಅವಿನಾಶ್ ಬಸುತ್ಕರ್ ಹಿನ್ನಲೆ ಸಂಗೀತವಿದೆ. ಶಾನ್ವಿ ಎಂಟರ್‌ಟೇನ್ಮೆಂಟ್ ಮೂಲಕ ದೀಪು ಬಿ.ಎಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಪ್ರಜ್ವಲ್ ಅಭಿನಯದ ‘ಗಣ’ ಚಿತ್ರವು ಜನವರಿ 31ರಂದು ಬಿಡುಗಡೆಯಾಗುತ್ತಿದ್ದು, ಇದು ಸಹ ಒಂದು ಟೈಮ್ ಲೂಪ್ ಚಿತ್ರವಾಗಿದೆ. ಇದು ತೆಲುಗಿನಲ್ಲಿ 2021ರಲ್ಲಿ ಬಿಡುಗಡೆಯಾದ ‘ಪ್ಲೇ ಬ್ಯಾಕ್’ ಎಂಬ ಚಿತ್ರದ ರೀಮೇಕ್ ಆಗಿದ್ದು, ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಹರಿಪ್ರಸಾದ್ ಜಕ್ಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.