Mysore
23
haze

Social Media

ಶುಕ್ರವಾರ, 24 ಜನವರಿ 2025
Light
Dark

ಅರೇಬಿಕ್‍ ಭಾಷೆಗೆ ರಾಜ್‍ ಬಿ ಶೆಟ್ಟಿ ಅಭಿನಯದ ‘ಟರ್ಬೋ’

ಮಲಯಾಳಂ ಸ್ಟಾರ್‍ ನಟ ಮಮ್ಮೂಟ್ಟಿ ಅಭಿನಯದ ‘ಟರ್ಬೋ’ ಚಿತ್ರದಲ್ಲಿ ಕನ್ನಡಿಗ ರಾಜ್‍ ಬಿ ಶೆಟ್ಟಿ ವಿಲನ್‍ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಹೊಸ ವಿಷಯವೇನಲ್ಲ. ಈಗಾಗಲೇ ಮೇ 24ರಂದು ಚಿತ್ರ ಬಿಡುಗಡೆಯಾಗಿದ್ದು, ರಾಜ್‍ ಅಭಿನಯದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈಗ ಈ ಚಿತ್ರವೊಂದು ಹೊಸ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಅರೇಬಿಕ್‍ ಭಾಷೆಗೆ ಡಬ್‍ ಆಗಿದ್ದು, ಅರೇಬಿಕ್ ಭಾಷೆಗೆ ಡಬ್‍ ಆಗಿ ಬಿಡುಗಡೆಯಾಗುತ್ತಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ‘ಟರ್ಬೋ’ ಪಾತ್ರವಾಗಿದೆ. ಈ ಚಿತ್ರಕ್ಕೆ 17 ಕಲಾವಿದರು ಡಬ್ ಮಾಡಿದ್ದು, ಆಗಸ್ಟ್ 02ರಂದು ಗಲ್ಫ್ ರಾಷ್ಟ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

‘ಟರ್ಬೋ’ ಚಿತ್ರವನ್ನು ಗಲ್ಫ್ ದೇಶಗಳಲ್ಲಿ ಟ್ರೂಥ್‍ ಗ್ಲೋಬಲ್‍ ಫಿಲಂಸ್ನ ಸಮದ್‍ ಟ್ರೂಥ್‍ ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ‘ಟರ್ಬೋ’ ಚಿತ್ರದ ಮಲಯಾಳಂ ಅವತರಣಿಕೆಯು ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದೆ. ಈಗ ಚಿತ್ರವನ್ನು ಅರೇಬಿಕ್ ಭಾಷೆಗೆ ಡಬ್‍ ಮಾಡಿ ಬಿಡುಗಡೆ ಮಾಡಲಾಗುತ್ತಿದ್ದು, ಈ ಪ್ರಯೋಗ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು, ಅದರಲ್ಲೂ ಮಲಯಾಳಂ ಚಿತ್ರಗಳು ಡಬ್‍ ಆಗಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಮಲಯಾಳಂ ನಲ್ಲಿ ‘ಪುಲಿಮುರುಗನ್’, ‘ಮಧುರೈ ರಾಜ’ದಂತಹ ಹಿಟ್‍ ಚಿತ್ರಗಳನ್ನು ನಿರ್ದೇಶಿಸಿರುವ ವೈಶಾಕ್‍, ಈ ಚಿತ್ರವನ್ನು ನಿರ್ದೇಶಿಸಿದ್ದು, ಮಮ್ಮೂಟ್ಟಿ ಕಂಪನಿ ಸಂಸ್ಥೆಯಡಿ ಈ ಚಿತ್ರವನ್ನು ಮಮ್ಮೂಟ್ಟಿ ಅವರೇ ನಿರ್ಮಿಸಿದ್ದಾರೆ. ಮಿಥುನ್ ಮ್ಯಾನುವಲ್ ಥಾಮಸ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜ್‍ ಬಿ ಶೆಟ್ಟಿ ಈ ಚಿತ್ರದಲ್ಲಿ ವೆಟ್ರಿವೇಲ್‍ ಷಣ್ಮುಖಂ ಎಂಬ ವಿಲನ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಅಭಿನಯದ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುವುದರ ಜೊತೆಗೆ, ಅವರಿಗೆ ಹಲವು ಚಿತ್ರಗಳಲ್ಲಿ ಅವಕಾಶ ಸಹ ಸಿಗುತ್ತಿದೆಯಂತೆ. ಆದರೆ, ಕನ್ನಡದಲ್ಲಿ ಒಂದಿಷ್ಟು ಚಿತ್ರಗಳಲ್ಲಿ ಒಳ್ಳೆಯ ಪಾತ್ರಗಳು ಸಿಗುತ್ತಿರುವುದರಿಂದ, ಸದ್ಯ ಕನ್ನಡದಲ್ಲೇ ಬ್ಯುಸಿಯಾಗಿದ್ದಾರೆ ರಾಜ್.

‘ಟರ್ಬೋ’ ಚಿತ್ರದಲ್ಲಿ ಮಮ್ಮೂಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅಲ್ಲದೆ, ಅಂಜನ ಜಯಪ್ರಕಾಶ್, ತೆಲುಗಿನ ಸುನೀಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಮುಂತಾದವರು ನಟಿಸಿದ್ದಾರೆ. ಕ್ರಿಸ್ಟೋ ಕ್ಸೇವಿಯರ್‍ ಸಂಗೀತ ಮತ್ತು ವಿಷ್ಣು ಶರ್ಮ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Tags: