ಕಳೆದ ವರ್ಷ ‘ಟೋಬಿ’ ಸೋಲಿನ ನಂತರ ರಾಜ್ ಬಿ ಶೆಟ್ಟಿ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ, ‘ಟರ್ಬೋ’ ಎಂಬ ಮಲಯಾಳಂ ಚಿತ್ರದಲ್ಲಿ ರಾಜ್ ಶೆಟ್ಟಿ, ಮಮ್ಮೂಟ್ಟಿ ಎದುರು ವಿಲನ್ ಆಗಿ ನಟಿಸಿದ್ದರು. ಈ ಚಿತ್ರದಲ್ಲಿ ರಾಜ್ ಶೆಟ್ಟಿ ಪಾತ್ರದ ಮತ್ತು ಪಾತ್ರ ಪೋಷಣೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತಾದರೂ, ಒಟ್ಟಾರೆ ಚಿತ್ರ ದೊಡ್ಡ ಸದ್ದು ಮಾಡಲಿಲ್ಲ.
ಈಗ ರಾಜ್ ಶೆಟ್ಟಿ ಸದ್ದಿಲ್ಲದೆ ‘ರೂಪಾಂತರ’ ಎಂಬ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಈ ಚಿತ್ರದಲ್ಲಿ ಅವರು ಬರೀ ನಟನಷ್ಟೇ ಅಲ್ಲ, ಸಂಭಾಷಣೆಕಾರರೂ ಹೌದು. ಈ ಹಿಂದೆ ‘ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ನಿರ್ಮಿಸಿದ್ದ ಸುಹಾನ್ ಪ್ರಸಾದ್ ಈ ಚಿತ್ರ ನಿರ್ಮಿಸಿದ್ದಾರೆ. ಆ ಚಿತ್ರಕ್ಕೆ ಛಾಯಾಗ್ರಹಣ ಮತ್ತು ಸಂಗೀತ ಸಂಯೋಜಿಸಿದ್ದ ಪ್ರವೀಣ್ ಶ್ರೀಯಾನ್ ಮತ್‍ತು ಮಿಥುನ್ ಮುಕುಂದನ್ ಈ ಚಿತ್ರದಲ್ಲೂ ಮುಂದುವರೆದಿದ್ದಾರೆ.
ಈ ಚಿತ್ರದ ಕುರಿತು ತಮ್ಮ ಇನ್‍ಸ್ಟಾಗ್ರಾಂ ಖಾತೆಯ ಮೂಲಕ ಒಂದಿಷ್ಟು ವಿಷಯಗಳನನು ಹಂಚಿಕೊಂಡಿರುವ ರಾಜ್ ಶೆಟ್ಟಿ, ‘ಕೆಲವು ಸಿನಿಮಾಗಳು ಮನಸ್ಸಿಗೆ ಹತ್ತಿರವಾಗಿರುತ್ತವೆ. ಅಂತಹ ಒಂದು ಸುಂದರವಾದ ಚಿತ್ರ ‘ರೂಪಾಂತರ’. ಈ ಸಿನಿಮಾದ ಭಾಗವಾಗಿರುವುದು ಜೊತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿ ಜೀವನದ ಭಾಗ್ಯ’ ಎಂದು ರಾಜ್ ಶೆಟ್ಟಿ ಹೇಳಿಕೊಂಡಿದ್ದಾರೆ. ಜೊತೆಗೆ ಈ ಚಿತ್ರದ ಮೊದಲ ನೋಟವನ್ನೂ ಅವರು ಹಂಚಿಕೊಂಡಿದ್ದಾರೆ.
‘ರೂಪಾಂತರ’ ಚಿತ್ರದಲ್ಲಿ ಸಾಕಷ್ಟು ಹೊಸ ಮುಖಗಳಿವೆ. ರಾಜ್ ಶೆಟ್ಟಿ ಜೊತೆಗೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ಮಿಥಿಲೇಶ್ ಎಡವಲತ್.
ರಾಜ್ ಬಿ ಶೆಟ್ಟಿ ಈ ಚಿತ್ರವನ್ನು ತಮ್ಮ ನಿರ್ಮಾಣ ಸಂಸ್ಥೆಯಾದ ಲೈಟರ್ ಬುದ್ಧ ಫಿಲಂಸ್ ಮೂಲಕ ಅರ್ಪಿಸುವುದರ ಜೊತೆಗೆ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.





