Mysore
15
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಪುನೀತ್ ಅಭಿಮಾನಿಯ ಕಥೆ ಹೇಳುವ ‘ಪುನೀತ್‍ ನಿವಾಸ’

ಪುನೀತ್ ರಾಜಕುಮಾರ್‍ ನೆನಪಲ್ಲಿ ಈಗಾಗಲೇ ಕೆಲವು ಚಿತ್ರಗಳು ಪ್ರಾರಂಭವಾಗಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ. ಈ ಮಧ್ಯೆ, ಪುನೀತ್‍ ಅಭಿಮಾನಿಯ ಕಥೆ ಹೇಳುವ ‘ಪುನೀತ್‍ ನಿವಾಸ’ ಸದ್ದಿಲ್ಲದೆ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್‍ ಬಿಡುಗಡೆಯಾಗಿದೆ.

‘ಪುನೀತ್‍ ನಿವಾಸ’ ಚಿತ್ರದಲ್ಲಿ ಮಾಸ್ಟರ್ ವಿಠ್ಠಲ್, ಅಭಿಜಿತ್‍, ಶಂಕರ್ ಭಟ್, ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಗಣೇಶ್‌ ರಾವ್ ಕೇಸರಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀ ಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಎಸ್.ಮೋಹನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದು ಮಲ್ಲು ಎಂಬ ಪುನೀತ್‍ ಅಭಿಮಾನಿಯ ಕಥೆಯಂತೆ. ಒಂದು ಸಿನಿಮಾ ಮಾಡಬೇಕೆಂದು ಹೊರಟ ಆತ ಕೊನೆಗೂ ಆ ಸಿನಿಮಾ ಮಾಡುತ್ತಾನಾ? ಪುನೀತ್‌ರ ಆದರ್ಶಗಳನ್ನು ಆತ ಹೇಗೆ ಪಾಲಿಸುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ನಾಲ್ಕು ವರ್ಷಗಳ ಹಿಂದೆಯೇ ನಿರ್ಮಾಪಕ ಮೋಹನ್‍ ದಾಖಲಿಸಿದ್ದರಂತೆ. ‘2021ರಲ್ಲೇ ನಾನು ಈ ಶೀರ್ಷಿಕೆ ರಿಜಿಸ್ಟರ್ ಮಾಡಿಸಿದ್ದೆ. ಅದಕ್ಕೆ ತಕ್ಕಂತೆ 50 ಕಥೆಗಳನ್ನು ಮಾಡಿದೆ. ಆದರೆ, ಯಾವುದೂ ಸರಿಹೊಂದಲಿಲ್ಲ, ಕೊನೆಗೆ ಈ ಕಥೆಯನ್ನು ಚಿತ್ರರೂಪಕ್ಕೆ ತಂದಿದ್ದೇವೆ. ಸಿನಿಮಾ ಮಾಡಬೇಕೆಂದು ಹಣ ಕೂಡಿಟ್ಟುಕೊಂಡಿದ್ದ ಒಬ್ಬ ಬಡ ಹುಡುಗ ಕೊನೆಗೆ ತನ್ನ ಕನಸಿನ ಸಿನಿಮಾವನ್ನು ಹೇಗೆ ನಿರ್ಮಿಸುತ್ತಾನೆ ಅನ್ನೋದೇ ಚಿತ್ರದ ಕಥೆ’ ಎಂದರು.

ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅಭಿಜಿತ್ ಮಾತನಾಡಿ, ‘ಈ ಶೀರ್ಷಿಕೆಗೆ ದೊಡ್ಡ ಪವರ್ ಇದೆ. ಶೀರ್ಷಿಕೆ ಹೇಳಿದಾಗ ನನಗೂ ರೋಮಾಂಚನವಾಗಿ, ತಕ್ಷಣವೇ ಒಪ್ಪಿಕೊಂಡೆ. ನಾನು ಪುನೀತ್ ಅವರ ಜತೆ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅವರ ಹೆಸರಿನ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ಮಾಪಕ ಮೋಹನ್ ಅವರು ಪುನೀತ್‌ರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಒಂದು ನಿಜವಾದ ಮನೆಯನ್ನೇ ಕಟ್ಟಿಸಿದ್ದಾರೆ’ ಎಂದು ಹೇಳಿದರು.

ಈ ಚಿತ್ರಕ್ಕೆ ಎಂ.ಎನ್‍. ಕೃಪಾಕರ್‍ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ತಾಯಿ ಸೆಂಟಿಮೆಂಟ್‍ ಹಾಡನನ್ನು ಅಭಿಜಿತ್‍ ಹಾಡಿದ್ದಾರೆ. ಚಿತ್ರಕ್ಕೆ ಬಾಲು ಛಾಯಾಗ್ರಹಣ, ಜೆಮ್ ಶಿವು ಸಂಭಾಷಣೆ, ಮುತ್ತುರಾಜ್ ಅವರ ಸಂಕಲನವಿದೆ.

Tags:
error: Content is protected !!