ಸುದೀಪ್ ಹುಟ್ಟುಹಬ್ಬಕ್ಕೆ (ಸೆ 02) ಒಂದು ಸರ್‍ಪ್ರೈಸ್ ಕೊಡುವುದಾಗಿ ನಿರ್ದೇಶಕ ಅನೂಪ್ ಭಂಡಾರಿ ಹೇಳಿಕೊಂಡಿದ್ದರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಅವರು, The Men will be right back ಎಂದು ಬರೆದುಕೊಂಡಿದ್ದಾರೆ. ಸೆಪ್ಟೆಂಬರ್ 02ರಂದು ಹೊಸ ಸುದ್ದಿಯೊಂದನ್ನು ಘೋಷಿಸುವುದಾಗಿ ಹೇಳಿದ್ದರು.
ಅದರಂತೆ, ಇಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಈ ಚಿತ್ರವು ವಿಕ್ರಾಂತ್ ರೋಣಗೂ ಮೊದಲೇ ಶುರುವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಗಿ ಇದೀಗ ಶುರುವಾಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲ ‘ಹನುಮಾನ್’ ಎಂಬ ಬ್ಲಾಕ್ಬಸ್ಟರ್ ಚಿತ್ರವನ್ನು ನಿರ್ಮಿಸಿದ್ದ ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಇನ್ನು, ಇತ್ತೀಚೆಗೆ ಈ ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ‘‘ಬಿಲ್ಲ ರಂಗ ಭಾಷಾ’ ಸದ್ಯದಲ್ಲೇ ಪ್ರಾರಂಭವಾಗಲಿದೆ. ಆರೇಳು ವರ್ಷಗಳಿಂದ ಕೆಲಸ ನಡೆಯುತ್ತಿದೆ. ‘ವಿಕ್ರಾಂತ್ ರೋಣ’ಗೂ ಮೊದಲೇ ಆ ಚಿತ್ರ ಮಾಡಬೇಕೆನ್ನುವ ಯೋಚನೆ ಇತ್ತು. ‘ವಿಕ್ರಾಂತ್ ರೋಣ’ ಚಿತ್ರವನ್ನು ನಾವು ಮಾಡಿದ್ದೇ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಸಾಧ್ಯವೋ ಇಲ್ಲವೋ ಎಂದು ನೋಡುವುದಕ್ಕೆ. ಏಕೆಂದರೆ, ನಮ್ಮ ಹತ್ತಿರ ದುಡ್ಡಿರಬಹುದು. ಆದರೆ, ಸಾಮರ್ಥ್ಯ ಇರುತ್ತದೋ ಇಲ್ಲವೋ ಗೊತ್ತಿರುವುದಿಲ್ಲ. ನಾವು ಹೇಳೋಕೆ ಹೋಗಿ ಅದು ತೆರೆಯ ಮೇಲೆ ಜೋಕ್ ಆಗಿ ಕಾಣಿಸಬಹುದು. ಹಾಗಾಗಿ, ಮೊದಲು ಈ ಚಿತ್ರ ಆಗುತ್ತಾ ಎಂದು ಗೊತ್ತಾಗಬೇಕಿದ್ದರೆ, ಬೇರೆ ಏನಾದರೂ ಮಾಡಬೇಕು. ‘ವಿಕ್ರಾಂತ್ ರೋಣ’ ಮಾಡಿದ್ದರಿಂದ ನಮ್ಮ ಸಾಮರ್ಥ್ಯ ಅರ್ಥವಾಯಿತು’ ಎಂದಿದ್ದಾರೆ ಸುದೀಪ್.
ಇದು ತಮ್ಮ ಜೀವನದಲ್ಲೇ ದೊಡ್ಡ ಚಿತ್ರವಾಗಲಿದೆ ಎಂದಿರುವ ಅವರು, ‘’ವಿಕ್ರಾಂತ್ ರೋಣ’ ನಂತರ ಒಂದು ತಂಡವಾಯಿತು. ನಮಗೆ ನಮ್ಮ ಮೇಲೆ ನಂಬಿಕೆ ಬಂತು. ಈಗ ‘ಬಿಲ್ಲ ರಂಗ ಭಾಷಾ’ ಮಾಡುವುದಕ್ಕೆ ಕೈ ಹಾಕಿದ್ದೇವೆ. ಈ ಚಿತ್ರ ನನ್ನ ಮತ್ತು ಅನೂಪ್ ಚಿತ್ರಜೀವನದಲ್ಲೇ ದೊಡ್ಡ ಸಿನಿಮಾಗಳು. ಚಿತ್ರಕ್ಕೆ ಸಾಕಷ್ಟು ರೀಸರ್ಚ್ ಕೆಲಸದ ಅವಶ್ಯಕತೆ ಇತ್ತು. ಅದಕ್ಕೆ ಸಾಕಷ್ಟು ಸಮಯವಾಯಿತು. ಇದೊಂದು ಅಪರೂಪದ ಚಿತ್ರವಾಗಿರುತ್ತದೆ’ ಎಂದು ಅವರು ಹೇಳಿದ್ದರು.
‘ಬಿಲ್ಲ ರಂಗ ಭಾಷಾ’ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದ್ದು, 2025ರಲ್ಲಿ ಬಿಡುಗಡೆ ಆಗಲಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.