Mysore
14
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಬಲರಾಮನಿಗೆ ನಾಯಕಿಯಾದ ಪ್ರಿಯಾ ಆನಂದ್ …

ನಟಿ ಪ್ರಿಯಾ ಆನಂದ್‍ಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈಗಾಗಲೇ ಅವರು ಪುನೀತ್‍ ರಾಜಕುಮಾರ್‍ ಅಭಿನಯದ ‘ರಾಜ್‍ಕುಮಾರ’ ಮತ್ತು ‘ಯುವರತ್ನ’, ಗಣೇಶ್‍ ಅಭಿನಯದ ‘ಆರೆಂಜ್‍’ ಮತ್ತು ಶಿವರಾಜಜಕುಮಾರ್‍ ಅಭಿನಯದ ‘ಕರಟಕ ದಮನಕ’ ಚಿತ್ರಗಳಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಅವರು ಕನ್ನಡದಲ್ಲಿ ರೆಟ್ರೋ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಕಳೆದ ವರ್ಷ ‘ಕರಟಕ ದಮನಕ’ ಚಿತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್‍, ಇದೀಗ ‘ಬಲರಾಮನ ದಿನಗಳು’ ಚಿತ್ರದಲ್ಲಿ ವಿನೋದ್‍ ಪ್ರಭಾಕರ್‍ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಬಲರಾಮನ ದಿನಗಳು’ ಚಿತ್ರವು ಬೆಂಗಳೂರು ಭೂಗತಲೋಕದ ಕುರಿತಾದ ಇನ್ನೊಂದು ಚಿತ್ರ. 80ರ ಕಾಲಘಟ್ಟದ ರೆಟ್ರೋ ಶೈಲಿಯ ಚಿತ್ರ. ಈ ಚಿತ್ರವನ್ನು ಕಳೆದ ವರ್ಷವೇ ಘೋಷಣೆ ಮಾಡಲಾಗಿತ್ತು ಮತ್ತು ಈಗಾಗಲೇ ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಗಿದೆ. ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರವಾಗಿರುವ ‘ಬಲರಾಮನ ದಿನಗಳು’ಗೆ ನಾಯಕಿಯಾಗಿ ಪ್ರಿಯಾ ಆನಂದ್‍ ಬಂದಿದ್ದಾರೆ. ದಿನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ನಾಯಕಿ ಪ್ರಿಯಾ ಆನಂದ್ ಅವರಿಗೆ ಚಿತ್ರತಂಡ ಸ್ವಾಗತ ಹೇಳಿದೆ.

‘ಆ ದಿನಗಳು’ ಖ್ಯಾತಿಯ ಕೆ‌.ಎಂ. ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಮೂರನೇ ಹಂತದ ಚಿತ್ರೀಕರಣ ಆರಂಭವಾಗಲಿದೆ‌.‌

ಇದು ನೈಜ ಘಟನೆಯನ್ನಾಧರಿಸಿದ ಚಿತ್ರವಲ್ಲ ಎನ್ನುವ ಚೈತನ್ಯ, ‘ಇದು 80-90ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಇದೊಂದು ಕಾಲ್ಪನಿಕ ಕಥೆ’ ಎನ್ನುತ್ತಾರೆ.

ತಮಿಳು ಮತ್ತು ತೆಲುಗಿನಲ್ಲಿ ‘ಕಬಾಲಿ’, ‘ಕಾಲ’, ‘ಕಲ್ಕಿ 2898 AD’ ಮುಂತಾದ ಯಶಸ್ವಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್‍ ನಾರಾಯಣ್‍, ‘ಬಲರಾಮನ ದಿನಗಳು’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಈ ಚಿತ್ರವನ್ನು ಪದ್ಮಾವತಿ ಫಿಲಂಸ್ ಬ್ಯಾನರ್‍ನಡಿ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

Tags:
error: Content is protected !!