ಶ್ರೀರಂಗಪಟ್ಟಣದ ಬಳಿ ನಟ ಪ್ರಕಾಶ್ ರೈ, ನಿರ್ದಿಗಂತ ಎಂಬ ರಂಗಶಾಲೆಯನ್ನು ಪ್ರಾರಂಭಿಸಿದ್ದು ಗೊತ್ತೇ ಇದೆ. ಕಳೆದ ಒಂದು ವರ್ಷದಿಂದ ಈ ರಂಗಶಾಲೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚೆಗೆ ಈ ಶಾಲೆಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಹಲವು ಚಟುವಟಿಕೆಗಳ ಮೂಲಕ ಪ್ರಕಾಶ್ ರೈ ಆಚರಿಸಿದ್ದಾರೆ.
ಪ್ರಕಾಶ್ ರೈ, ನಿರ್ದಿಗಂತವನ್ನು ಸರ್ಕಾರದ ಅನುದಾನ ಪಡೆದು ನಿರ್ಮಿಸಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಪ್ರಕಾಶ್ ರೈ ಅವರು ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಿರುವುದರಿಂದ ಈ ಶಾಲೆ ನಿರ್ಮಿಸುವುದಕ್ಕೆ ಸರ್ಕಾರದಿಂದ ಅನುದಾನ ಮತ್ತು ಜಾಗ ಸಿಕ್ಕಿದೆ ಎಂಬಂತಹ ಮಾತುಗಳು ಕೇಳಿಬಂದಿದ್ದವು. ಆದರೆ, ಅದು ಶುದ್ಧ ಸುಳ್ಳು ಎನ್ನುತ್ತಾರೆ ಅವರು.
ಈ ಕುರಿತು ಮಾತನಾಡಿರುವ ಅವರು, ‘ನಾನು ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಇದು ನಮ್ಮ ದುಡ್ಡಿನಿಂದ ಕಟ್ಟಿದ ಒಂದು ಸಂಸ್ಥೆ. ಈ ರೀತಿಯಾಗಿ ಹಲವು ಕೆಲಸಗಳನ್ನು ಸ್ವಂತ ದುಡ್ಡಿನಿಂದ ಮಾಡುತ್ತಿದ್ದೇನೆ. ಸರಕಾರದಿಂದ ಅನುಮತಿ ಬಿಟ್ಟರೆ ಬೇರೇನನ್ನೂ ಕೇಳಿಲ್ಲ. ನಿಜ ಹೇಳಬೇಕೆಂದರೆ, 40 ಸಾವಿರ ಅನುದಾನ ಕೊಡುವುದಕ್ಕೆ ತಯಾರಿದ್ದರು. ಆದರೆ, ಒಂದೂವರೆ ಎರಡು ಕೋಟಿ ರೂ ಹಾಕಿ 40 ಸಾವಿರ ಅನುದಾನ ಪಡೆಯುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.
ಇನ್ನು, ನಿರ್ದಿಗಂತದ ಕುರಿತು ಮಾತನಾಡುವ ಅವರು, ‘ಇದೊಂದು ರಂಗಶಾಲೆ ಎನ್ನುವುದಕ್ಕಿಂತ ರಂಗಭೂಮಿಯ ಕಲಾವಿದರಿಗೆ ಕಾವುಗೂಡು ಎನ್ನುವುದು ಸರಿಯಾದ ಪದ. ನಾನು ರಂಗಭೂಮಿಯಿಂದ ಬಂದವನು. ರಂಗಭೂಮಿಗೆ ಏನಾದರೂ ವಾಪಸ್ಸು ಕೊಡಬೇಕು ಎಂಬ ಆಸೆ ಇದ್ದೇ ಇತ್ತು. ಆದರೆ, ಏನು ಕೊಡುವುದು. ರಂಗತಂಡ ಕಟ್ಟುವುದಾ? ನಾಟಕಗಳಲ್ಲಿ ಪುನಃ ಅಭಿನಯಿಸುವುದಾ? ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಅದೆಲ್ಲಕ್ಕಿಂತ ಹೆಚ್ಚಾಗಿ ಸಮಕಾಲೀನ ಸಾಂಸ್ಖೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಕೊಳ್ಳುವ ಹಂಬಲದಿಂದ ಹುಟ್ಟಿಕೊಂಡಿದ್ದು ನಿರ್ದಿಗಂತ’ ಎಂದರು.
ಈ ಸಂಸ್ಥೆಗೆ ನಿರ್ದಿಗಂತ ಎಂಬ ಹೆಸರು ಇಟ್ಟ ಬಗೆ ವಿವರಿಸಿದ ಅವರು, ‘ಇದೊಂದು ರಂಗಭೂಮಿ ಅಥವಾ ನಾಟಕ ಶಾಲೆ ಎನ್ನುವದಕ್ಕಿಂತ ಸಾಹಿತ್ಯ, ಚಿತ್ರಕಲೆ, ನೃತ್ಯ, ಶಿಲ್ಪ ಮೊದಲಾದ ಲಲಿತ ಕಲೆಗಳನ್ನೊಳಗೊಂಡ ಜಾಗ ಎನ್ನಬಹುದು. ಇದಕ್ಕೆ ಏನು ಹೆಸಿರಡಬಹುದು ಎಂದು ಯೋಚಿಸುತ್ತಿದ್ದಾಗ, ಕುವೆಂಪು ಅವರ ಕಾವ್ಯದ ಸಾಲುಗಳಲ್ಲಿ ರೂಪಕವಾಗಿ ಬರುವ ನಿರ್ದಿಗಂತ ಸರಿ ಎನಿಸಿತು. ಹಾಗಾಗಿ, ಈ ಹೆಸರು ಇಟ್ಟಿದ್ದೇವೆ’ ಎಂದರು.
ಪ್ರಕಾಶ್ ರೈ ಅವರ ಜೊತೆಗೆ ಡಾ. ಶ್ರೀಪಾದ್ ಭಟ್, ಶಾಲೋಮ್ ಸನ್ನುತ, ಮುನ್ನ ಮೈಸೂರು, ಸುಶ್ಮಿತಾ ಚೈತನ್ಯ, ಅನುಷ್ ಶೆಟ್ಟಿ, ಕೃಪಾಕರ ಸೇನಾನಿ ಮುಂತಾದವರು ಈ ಸಂಸ್ಥೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐದು ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ನಿರ್ದಿಗಂತದಲ್ಲಿ ಕಳೆದ ಒಂದು ವರ್ಷದಿಂದ ಹಲವು ಚಟುವಟಿಕೆಗಳು ನಡೆಯುತ್ತಿವೆ.