Mysore
22
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ: ರಾಜ್‍ ಬಿ ಶೆಟ್ಟಿ

ರಾಜ್‍ ಬಿ ಶೆಟ್ಟಿ ಅಭಿನಯದ ಬಗ್ಗೆ ‘ಟೋಬಿ’ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಚಿತ್ರ ನಿರೀಕ್ಷೆ ಗೆಲುವು ಕಾಣಲಿಲ್ಲ. ಅದಕ್ಕೆ ಸರಿಯಾಗಿ ಚಿತ್ರದ ಬಗ್ಗೆಯೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸೋಲಿನಿಂದ ರಾಜ್ ಶೆಟ್ಟಿ ಬಹಳಷ್ಟು ಪಾಠ ಕಲಿತಿರುವಂತೆ ಕಾಣುತ್ತದೆ. ಅವರೇ ಹೇಳಿಕೊಂಡಂತೆ ‘ಟೋಬಿ’ಯಲ್ಲಿ ಕಲಿತ ಬಗ್ಗೆ ಅವರು ಯಾವ ಚಿತ್ರದಲ್ಲೂ ಕಲಿತಿಲ್ಲವಂತೆ.

ಈ ಕುರಿತು ಇತ್ತೀಚೆಗೆ ಮಾತನಾಡಿರುವ ರಾಜ್‍, ‘ಸೋಲು ಬಹಳ ಸುಂದರ. ನಾನು ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ‘ಟೋಬಿ’ಯಲ್ಲಿ ಕಲಿತಷ್ಟು ಯಾವ ಚಿತ್ರದಲ್ಲೂ ಕಲಿತಿಲ್ಲ. ‘ಟೋಬಿ’ ಸೋಲಿನಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಈ ಸೋಲಿನಿಂದ ಸ್ವಲ್ಪ ಹಿನ್ನೆಡೆ ಆಗಬಹುದು. ಗೆಲುವು ಆತ್ಮವಿಶ್ವಾಸ ಕೊಟ್ಟರೆ, ಸೋಲು ಹಲವು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟುಹಾಕುತ್ತವೆ. ಎಲ್ಲಿ ತಪ್ಪು ಮಾಡಿದೆ? ನಾವೆಷ್ಟು ಬದಲಾಗಿದ್ದೇವೆ? ಇವೆಲ್ಲವೂ ಯೋಚಿಸುವಂತೆ ಮಾಡುತ್ತದೆ’ ಎನ್ನುತ್ತಾರೆ.

ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ ಎನ್ನುವ ರಾಜ್‍, ‘ನಾವು ಆರಂಭದಲ್ಲಿ ಚಿತ್ರರಂಗಕ್ಕೆ ಬಂದಾಗ ಮುಗ್ಧರಾಗಿರುತ್ತೇವೆ. ಕ್ರಮೇಣ ನಮ್ಮಲ್ಲೊಂದು ಬದಲಾವಣೆ ಆಗುತ್ತದೆ. ನಾವು ಸೋತಾಗ, ನಮಗೆ ನಾವೇ ಎಲ್ಲಿ ಸೋತೆವು ಎಂದು ಪ್ರಶ್ನೆ ಮಾಡಿಕೊಂಡರೆ ಎಲ್ಲವೂ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಸೋತಿದ್ದಕ್ಕೆ ನಾನು ಬಹಳ ಲಕ್ಕಿ ಎನ್ನಬೇಕು. ಸೋತಾಗ ಸ್ವಲ್ಪ ಕಷ್ಟವಾಗುವುದು ಹೌದು. ಆದರೆ, ಇವತ್ತಿನ ಈ ಎನರ್ಜಿಗೆ ‘ಟೋಬಿ’ ಚಿತ್ರದ ಸೋಲು ಕಾರಣ. ಆ ಚಿತ್ರ ಗೆದ್ದಿದ್ದರೆ, ನಾನು ಸಹ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದೆನೇನೋ? ಅಷ್ಟರಲ್ಲಿ ಸೋತೆ. ಮುಂದೆ ತಪ್ಪಾದರೆ ಭಯವಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣ ಎಂಬ ಧೈರ್ಯ ಬರುತ್ತದೆ. ಸೋಲು ತುಂಬಾ ಸ್ವಾತಂತ್ರ್ಯ ಕೊಡುತ್ತದೆ’ ಎಂಬುದು ರಾಜ್‍ ಮಾತು.

‘ಟೋಬಿ’ ಸೋತರೂ, ಅದರಿಂದ ಒಬ್ಬ ನಟನಾಗಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆಯಂತೆ. ‘ಆ ಚಿತ್ರ ಕಮರ್ಷಿಯಲ್‍ ಆಗಿ ಗೆಲ್ಲದೇ ಇರಬಹುದು. ಒಬ್ಬ ನಟನಾಗಿ ನನಗೆ ಆ ಚಿತ್ರದ ನಂತರ ಬಹಳ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಮೊದಲ ಬಾರಿಗೆ ಏನೋ ಮಾಡಬಹುದು ಅಂತ ಅನಿಸುತ್ತಿದೆ. ಸದ್ಯ ‘45’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದಲ್ಲದೆ ಇನ್ನೊಂದೆರಡು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಮಲಯಾಳಂನಿಂದ ಒಂದಿಷ್ಟು ಅವಕಾಶಗಳು ಬರುತ್ತಿವೆ. ಆದರೆ, ಸದ್ಯ ಅಲ್ಲಿಗೆ ಹೋಗಿ ನಟಿಸುವಷ್ಟು ಪುರುಸೊತ್ತಿಲ್ಲ. ಇದಲ್ಲದೆ ಒಂದು ವೆಬ್‍ ಸೀರೀಸ್ ಸಹ ಮಾಡುತ್ತಿದ್ದೀನಿ’ ಎಂದು ಅವರು ಮಾಹಿತಿ ಕೊಡುತ್ತಾರೆ.

Tags: