ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಸದ್ಯದಲ್ಲೇ ಅಧಿಕೃತವಾಗಿ ಘೋಷಣೆಯಾಗಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಇದೀಗ ಚಿತ್ರದ ಶೀರ್ಷಿಕೆ ಘೋಷಣೆಯಾಗಿದ್ದು, ಚಿತ್ರಕ್ಕೆ ಸೀತಾ ಪಯಣ ಎಂಬ ಹೆಸರನ್ನು ಇಡಲಾಗಿದೆ.
ಹೌದು, ಇತ್ತೀಚೆಗೆ ಸೀತಾ ಪಯಣ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಹೆಸರು ಕೇಳಿದರೆ ಇದೊಂದು ನಾಯಕಿ ಪ್ರಧಾನ ಚಿತ್ರ ಎಂದನಿಸುತ್ತದೆ. ಅದಕ್ಕೆ ಸರಿಯಾಗಿ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಐಶ್ವರ್ಯಾ ಅರ್ಜುನ್ ಎದುರು ನಾಯಕನಾಗಿ ನಿರಂಜನ್ ಸುಧೀಂದ್ರ ನಟಿಸುತ್ತಿದ್ದಾರಂತೆ.
ಸೀತಾ ಪಯಣ ಚಿತ್ರವನ್ನು ಅರ್ಜುನ್ ಸರ್ಜಾ ನಿರ್ದೇಶಿಸುತ್ತಿರುವುದಷ್ಟೇ ಅಲ್ಲ, ತಮ್ಮ ಶ್ರೀ ರಾಮ್ ಫಿಲಂಸ್ ಇಂಟರ್‍ನ್ಯಾಷನಲ್ ಸಂಸ್ಥೆಯಡಿ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಯಾರು ನಟಿಸುತ್ತಿದ್ದಾರೆ, ಕಥೆ ಏನು ಮುಂತಾದ ವಿಷಯಗಳನ್ನು ಅರ್ಜುನ್ ಸರ್ಜಾ ಸದ್ಯ ಬಿಟ್ಟುಕೊಟ್ಟಿಲ್ಲ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.
2018ರಲ್ಲಿ ಬಿಡುಗಡೆಯಾದ ಪ್ರೇಮ ಬರಹ ಚಿತ್ರದ ನಂತರ ಅರ್ಜುನ್ ಸರ್ಜಾ ಬೇರೆ ಯಾವೊಂದು ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಚಂದನ್ ಮತ್ತು ಐಶ್ವರ್ಯಾ ಅಭಿನಯದಲ್ಲಿ ತಯಾರಾದ ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿತ್ತು. ಆದರೆ, ಚಿತ್ರ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.
ಇನ್ನು, ನಿರಂಜನ್ ಸುಧೀಂದ್ರ ಸದ್ಯ ಸೂಪರ್ ಸ್ಟಾರ್ ಮತ್ತು ಹಂಟರ್ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದು, ಆ ಎರಡೂ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿವೆ. ಈ ಮಧ್ಯೆ, ನಾಗಶೇಖರ್ ನಿರ್ದೇಶಿಸಲಿರುವ ‘ಕ್ಯೂ’ಎಂಬ ಚಿತ್ರಕ್ಕೂ ನಿರಂಜನ್ ನಾಯಕನಾಗಿ ಆಯ್ಕೆಯಾಗಿದ್ದು, ಆ ಚಿತ್ರ ಇನ್ನಷ್ಟೇ ಪ್ರಾರಂಭವಾಗಬೇಕಿದೆ.